ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಬೆಂಗಳೂರು: ಸಚಿವ ಡಿ ಸುಧಾಕರ್ ವಿರುದ್ಧ ಜಾತಿ ನಿಂದನೆ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಸಂಸದ ಡಿ ವಿ ಸದಾನಂದ ಗೌಡ ಅವರು, ಜಾತಿ ನಿಂದನೆ ಕೇಸ್ ಆಗಿದ್ದರೆ, ಯಾವುದೇ ಸ್ಥಾನದಲ್ಲಿ ಇರಲಿ, ಅವರು ಮಿನಿಸ್ಟರ್ ಆಗಿರಲಿ, ಅವರನ್ನು ಮೊದಲು ಬಂಧಿಸಿ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಇಂದು ಕರೆದಿದ್ದ ರಾಜ್ಯ ಪದಾಧಿಕಾರಿಗಳ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಾತಿ ನಿಂದನೆ ಕೇಸ್ನ ಕಾರ್ಯವ್ಯಾಪ್ತಿ ಏನು ಅಂತ ಎಲ್ಲರಿಗೂ ಗೊತ್ತಿದೆ. ಸಣ್ಣವರ ಮೇಲೂ ಜಾತಿ ನಿಂದನೆ ಕೇಸ್ ಹಾಕಿ ಎಷ್ಟೆಲ್ಲ ಕಿರುಕುಳ ಕೊಡುತ್ತಾರೆ. ಬೇರೆಯವರ ರೀತಿಯೇ ಸಚಿವ ಡಿ. ಸುಧಾಕರ್ ಅವರನ್ನು ಮೊದಲು ಒಳಗೆ ಹಾಕಿ ತನಿಖೆ ಮಾಡಲಿ ಎಂದರು.
ಕಾಂಗ್ರೆಸ್ ದಲಿತರ ಪರ ಎಂದು ಹೇಳುತ್ತದೆ. ಆದರೆ, ಅವರ ನಾಯಕರಿಂದಲೇ ಎಸ್ಸಿ, ಎಸ್ಟಿ ಸಮುದಾಯದವರಿಗೆ ಅನ್ಯಾಯ ಆಗುತ್ತಿದೆ. ಇದರ ಬಗ್ಗೆ ಸಿದ್ದರಾಮಯ್ಯ ಏನಂತಾರೆ?. ಅವರ ಪಕ್ಷದವರಿಗೆ ಎಸ್ಸಿ ಎಸ್ಟಿ ಕಾನೂನು ಬೇರೆ ಇದೆಯಾ?. ಅವರ ಪಕ್ಷಪಾತ ಧೋರಣೆ ಇದರಿಂದಲೇ ಗೊತ್ತಾಗುತ್ತದೆ ಎಂದು ಟೀಕಿಸಿದರು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ವಿರುದ್ಧವೂ ಒಂದು ಕೇಸ್ ಇತ್ತು. ಮಾಜಿ ಸಿಎಂ ಆದರೂ ಸಹ ಅವರನ್ನು ಬಂಧಿಸಲಾಗಿದೆ. ಎಸ್ಸಿ ಎಸ್ಟಿ ಪರವಾಗಿಯೇ ನಾವು ಇರುವುದು ಎಂದು ಬಹುಪರಾಕ್ ಹಾಕುತ್ತಿರುವ ಕಾಂಗ್ರೆಸ್. ಅವರ ಪಕ್ಷದ ನಾಯಕರಿಂದಲೇ ಅನ್ಯಾಯ ಆಗುತ್ತಿರುವುದು ವಿಪರ್ಯಾಸ. ಪದ್ಮನಾಭ ನಗರದಲ್ಲಿ ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿವಿಎಸ್, ಹತಾಶೆಯಲ್ಲಿರುವ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತದಂತಹ ಪ್ರಯತ್ನಗಳಿಗೆ ಕೈ ಹಾಕುತ್ತಾರೆ ಎಂದು ಹೇಳಿದರು.
ಆಡಳಿತಕ್ಕೆ ಬಂದ ಮೂರು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಇಷ್ಟು ದೊಡ್ಡ ಜನ ವಿರೋಧಿ ಆಗಿದೆ. ಸಿದ್ದರಾಮಯ್ಯ ಹಿಂದಿನಂತೆ ಈಗ ಇಲ್ಲ. ಅವರ ಹಳೆಯ ಅನುಭವ ಎಲ್ಲಿ ಹೋಯ್ತೋ? ಬಿ. ಕೆ. ಹರಿಪ್ರಸಾದ್, ಬಸವರಾಜ ರಾಯರೆಡ್ಡಿ ಸೇರಿದಂತೆ ಅನೇಕರು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಲೋಕಸಭೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲವೂ ಕೇಂದ್ರದ ವರಿಷ್ಠರು ನೋಡಿಕೊಳ್ಳುತ್ತಾರೆ. ಆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ನಮ್ಮ ನಾಯಕರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ :ಸಚಿವ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲು.. ಜಾತಿ ನಿಂದನೆಯಾಗಿದ್ದರೆ ರಾಜೀನಾಮೆ ನೀಡಲಿ ಎಂದ ಬಸವರಾಜ ಬೊಮ್ಮಾಯಿ