ಬೆಂಗಳೂರು:2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ಗೆ ಅನುದಾನ ಬಿಡುಗಡೆಯಾಗಿಲ್ಲ. ಈಗ ತಾತ್ಕಾಲಿಕವಾಗಿ ಇಂದಿರಾ ಕ್ಯಾಂಟೀನನ್ನು ಮುಂದುವರಿಸಲಾಗುತ್ತಿದೆ. ಆದರೆ ಮುಂದಿನ 15 ದಿನಗಳಲ್ಲಿ ಅನಿವಾರ್ಯವಾಗಿ ಯೋಜನೆಯನ್ನು ಮುಚ್ಚುವ ಸ್ಥಿತಿ ಬಂದಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ಸದಸ್ಯರ ಗಮನಕ್ಕೆ ತಂದರು.
ಇಂದಿರಾ ಕ್ಯಾಂಟೀನ್ ಬಗೆಗಿನ ಅಂಕಿಅಂಶಗಳು:
ಇಂದಿರಾ ಕ್ಯಾಂಟೀನ್ನಲ್ಲಿ ಈವರೆಗೆ 14 ಕೋಟಿ 40 ಲಕ್ಷ ಜನರು ಊಟ ಮಾಡಿದ್ದಾರೆ. ರಾಜ್ಯ ಸರ್ಕಾರದ ಯೋಜನೆ ಇದಾಗಿದ್ದು, ಕಳೆದ ಎರಡು ವರ್ಷ ಸರ್ಕಾರ ಯೋಜನೆಗೆ ಅನುದಾನ ನೀಡಿತ್ತು. ನಗರದಲ್ಲಿ ಒಟ್ಟು 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟೀನ್ಗಳಿವೆ. 2017-18 ರಲ್ಲಿ ಸರ್ಕಾರ 100 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆಗ 24 ಕೋಟಿ ರೂ ಹೆಚ್ಚುವರಿ ಖರ್ಚಾಗಿತ್ತು. 2018-19ರಲ್ಲಿಯೂ ಕೂಡ ಸರ್ಕಾರ ಬಿಡುಗಡೆ ಮಾಡಿದ್ದಕ್ಕಿಂತ ಹೆಚ್ಚುವರಿ ಹಣ ಖರ್ಚಾಗಿತ್ತು. ಹೀಗಾಗಿ 2019-20 ನೇ ಸಾಲಿನಲ್ಲಿ 210 ಕೋಟಿ ರೂ. ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು ಎಂದರು.
ಆದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನಿಗೆ ಯಾವುದೇ ಹಣ ಮೀಸಲಿಡಲಿಲ್ಲ. ಅನುದಾನ ರಿಲೀಸ್‌ಗಾಗಿ 3 ಪತ್ರವನ್ನು ಬರೆಯಲಾಗಿತ್ತು. ಇವತ್ತಿಗೂ ಸರ್ಕಾರವಾಗಲೀ, ಪಾಲಿಕೆಯಾಗಲಿ ಯೋಜನೆಗೆ ಹಣ ಮೀಸಲಿಟ್ಟಿಲ್ಲ. ಹೀಗಾಗಿ ಕ್ಯಾಂಟೀನ್‌ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದ್ದು, ನೀವು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದು ಪಾಲಿಕೆ ಸದಸ್ಯರ ಗಮನ ಸೆಳೆದರು.
'ಯಾವುದೇ ಕಾರಣಕ್ಕೂ ಕ್ಯಾಂಟಿನ್ ಮುಚ್ಚಲ್ಲ'