ಬೆಂಗಳೂರು: ವಿಧಾನಸಭೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಹೌದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ ಪ್ರಮುಖ ಆದ್ಯತೆ ನೀಡಲಾಗಿದೆ.
ಕರ್ನಾಟಕ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ:ಕಳೆದ ಆಯವ್ಯಯದಲ್ಲಿ ಘೋಷಿಸಿದಂತೆ ಮುಂದಿನ ಐದು ವರ್ಷಗಳಲ್ಲಿ ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಕೆಐಟಿ)ಗಳಾಗಿ ಉನ್ನತೀಕರಿಸಲು ಬೆಂಗಳೂರು, ಹಾಸನ, ಹಾವೇರಿ, ಕೆ.ಆರ್.ಪೇಟೆ, ತಳ್ಳಲ್, ರಾಮನಗರ ಹಾಗೂ ಕಾರವಾರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಗುರುತಿಸಲಾಗಿದೆ. ಐಐಟಿ, ಐಐಎಂ, ಐಐಎಸ್ಸಿ/, ಎನ್ಐಟಿ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ 4 ಲಕ್ಷ ಅನುದಾನು ಒದಗಿಸಲಾಗುವುದು.
ಪ್ರೊ.ಸಡಗೋಪನ್ ನೇತೃತ್ವದ ತಜ್ಞರ ಸಮಿತಿ:ಪ್ರೊ.ಸಡಗೋಪನ್ ನೇತೃತ್ವದ ತಜ್ಞರ ಸಮಿತಿಯು ಕೆಐಟಿಗಳಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಕುರಿತು ವರದಿ ಸಲ್ಲಿಸಿದೆ. ಹೀಗಾಗಿ ಸಮಿತಿಯ ಶಿಫಾರಸ್ಸಿನ ಅನ್ವಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶಕ್ಕಾಗಿ 50 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳು ಹಾಗೂ ಪಠ್ಯ ವಿಷಯಗಳನ್ನು ಮುಂದಿನ ಒಂದು ವರ್ಷದಲ್ಲಿ ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು.
ರೀಡಿಂಗ್ ಕಾರ್ನರ್ಗಳ ಸ್ಥಾಪನೆಗೆ ಚಿಂತನೆ:ಪ್ರಚಲಿತ ವಿದ್ಯಮಾನಗಳ ಕುರಿತು ಆಸಕ್ತಿ ಹಾಗೂ ಅರಿವು ಹೊಂದಲು ಅನುವಾಗುವಂತೆ 24,347 ಶಾಲೆಗಳಲ್ಲಿ 20 ಕೋಟಿ ರೂ. ಅನುದಾನದಲ್ಲಿ ಪುಸ್ತಕ, ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಒದಗಿಸುವ ಮೂಲಕ ಗಂಥಾಲಯಗಳ ಬಲವರ್ಧನೆ ಹಾಗೂ ರೀಡಿಂಗ್ ಕಾರ್ನರ್ಗಳನ್ನು ಸ್ಥಾಪಿಸಲಾಗುವುದು.
'ಅಭ್ಯುದಯ' ಕಾರ್ಯಕ್ರಮ ಅನುಷ್ಠಾನ:ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಜೆ-ಪಾಲ್ ಸಹಯೋಗದೊಂದಿಗೆ ಪರಿಹಾರಾತ್ಮಕ ಚಟುವಟಿಕೆ 'ಅಭ್ಯುದಯ' ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು.