ಬೆಂಗಳೂರು :ಕೊರೊನಾ ಎಫೆಕ್ಟ್ನಿಂದ ಒಂದೆಡೆ ಮದ್ಯ, ಸಿಗರೇಟ್, ಗುಟ್ಕಾ ಚಟಕ್ಕೆ ಬಿದ್ದವರು ಚಡಪಡಿಸುತ್ತಿದ್ದಾರೆ. ಇನ್ನೊಂದೆಡೆ ವ್ಯಸನಿಗಳ ಚಡಪಡಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅಕ್ರಮ ಮಾರಾಟ ಮೂಲಕ ನಿಗದಿತ ದರಕ್ಕಿಂತ ದುಪ್ಪಟ್ಟು ವಸೂಲಿ ಮಾಡುತ್ತಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡದಂತೆ ಎಚ್ಚರ ವಹಿಸಿರುವ ಕೇಂದ್ರ ಸರ್ಕಾರ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್ಡೌನ್ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ಮದ್ಯ, ಸಿಗರೇಟ್, ಗುಟ್ಕಾ ಮಾರಾಟ ನಿಷೇಧಿಸಲಾಗಿದೆ. ಆದರೂ ರಾಜ್ಯದೆಲ್ಲೆಡೆ ಕಾಳಸಂತೆಯಲ್ಲಿ ಮದ್ಯ, ಸಿಗರೇಟ್ ಮತ್ತಿತರ ನಿಷೇಧಿತ ವಸ್ತುಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಕೆಲ ಅಂಗಡಿಯವರು ಪೊಲೀಸರ ಕಣ್ಣು ತಪ್ಪಿಸಿ ಅಕ್ರಮ ಮಾರಾಟ ದಂಧೆ ನಡೆಸುತ್ತಿದ್ದಾರೆ.
ನಗರದ ಕೆಲ ಕಡೆ ಅಕ್ರಮವಾಗಿ ಮದ್ಯವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ಮನೆ ಹಾಗೂ ಅಂಗಡಿಗಳಲ್ಲಿ ಬಚ್ಚಿಟ್ಟು ಬೀಡಿ, ಸಿಗರೇಟ್, ಗುಟ್ಕಾವನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಕಾಳಸಂತೆ ವ್ಯವಹಾರ ಕೇವಲ ನಗರಕ್ಕೆ ಸೀಮಿತವಾಗಿಲ್ಲ. ಬಹುತೇಕ ಕಡೆ ಕದ್ದುಮುಚ್ಚಿ ನಡೆಯುತ್ತಿದೆ. ಹಣವಿದ್ದವರು ದುಬಾರಿ ಬೆಲೆಕೊಟ್ಟು ಮದ್ಯ, ಗುಟ್ಕಾ, ಸಿಗರೇಟ್ ಖರೀದಿಸುತ್ತಿದ್ದಾರೆ. ಹಣ ಕೊಡಲು ಸಾಧ್ಯವಾಗದಿರುವ ವ್ಯಸನಿಗಳು, ಅಂಗಡಿ ತೆರೆಯುವುದನ್ನೇ ಕಾಯುತ್ತಿದ್ದಾರೆ. ನಗರದಲ್ಲಿ ಇಂತಹ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರನ್ನೂ ಪೊಲೀಸರು ಬಂಧಿಸಿದ್ದರು.
ದುಬಾರಿ ಬೆಲೆ :ಮದ್ಯಕ್ಕೆ ಎರಡು, ಮೂರು ಪಟ್ಟು ಹಣ ಪಡೆದು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಉದಾಹರಣೆಗೆ ಒಂದು ಬಿಯರ್ಗೆ ₹145 ಇದ್ರೆ ಕಾಳಸಂತೆಯಲ್ಲಿ ₹200 ರಿಂದ 300 ರೂ.ವರೆಗೂ ಮಾರಾಟವಾಗುತ್ತಿರುವ ಮಾಹಿತಿ ಸಿಕ್ಕಿದೆ. ಗುಟ್ಕಾ ಪದಾರ್ಥಗಳನ್ನೂ ನಿಷೇಧಿಸಲಾಗಿದೆ. ಆದರೂ ಕಾಳಸಂತೆಯಲ್ಲಿ ಮಸಾಲ ಸೇರಿ 13 ರೂ. ಬೆಲೆಯ ಮಾಣಿಕ್ ಚಂದ್ಗೆ 25 ರೂ., 10 ರೂ. ಬೆಲೆಯ ವಿಮಲ್ 20 ರೂ.ಗೆ, 4 ರೂ. ಸ್ಟಾರ್‌ಗೆ 8 ರೂ.ಗೆ, ಸೂಪರ್ 3 ರೂ. ಬದಲಿಗೆ 6 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಪ್ಯಾಕೇಟ್ ಸಿಗರೇಟ್ ₹400 ರಿಂದ 500 ರೂ.ಗೆ ಮಾರಾಟವಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದ್ರೆ ಸರಬರಾಜು ಇಲ್ಲವೆಂದು ಅಂಗಡಿಯವರು ಸಬೂಬು ಹೇಳುತ್ತಾರೆ. ಈ ಅಕ್ರಮ ಮಾರಾಟಕ್ಕೆ ಪೊಲೀಸರು, ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.