ಬೆಂಗಳೂರು:ಕರ್ನಾಟಕ ಮುನ್ಸಿಪಲ್ ಕಾಪೋರೇಷನ್ ಕಾಯ್ದೆಯಲ್ಲಿ (ಕೆಎಂಸಿ) ವ್ಯಕ್ತಿ ಹಾಗೂ ರಾಜ್ಯ ಸರ್ಕಾರ ಎಂಬ ಪದಗಳನ್ನು ಒಂದೇ ರೀತಿಯಲ್ಲಿ ಅರ್ಥೈಸಲು ಸಾದ್ಯವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ 1999 (ಕೆಟಿಪಿಪಿ) ನಿಯಮಗಳನ್ನು ಉಲ್ಲಂಘಿಸಿ ಅರಣ್ಯ ಇಲಾಖೆಯಿಂದ ಕಟ್ಟಡ ನಿರ್ಮಾಣವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಸರ್ಕಾರಿ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕ್ರಮವನ್ನು ಪ್ರಶ್ನಿಸಿ ಹುಬ್ಬಳ್ಳಿ ನಿವಾಸಿ ಮಂಜುನಾಥ್ ಬದಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ಧೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.
ಕೆಪಿಟಿಟಿ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಯಾವುದೇ ವ್ಯಕ್ತಿಯಿಂದ ಕಟ್ಟಡ ನಿರ್ಮಾಣಕ್ಕೆ ಅನಮತಿ ಕಡ್ಡಾಯವಾಗಿದೆ. ಆದರೆ, ಸರ್ಕಾರದಿಂದ ಎಂಬುದು ಒಳಗೊಂಡಿಲ್ಲ. ಈ ಕಟ್ಟಡ ಸರ್ಕಾರವೇ ನಿರ್ಮಾಣ ಮಾಡುತ್ತಿದೆ. ಅಲ್ಲದೆ, ಕಾಯಿದೆಯ ಸೆಕ್ಷನ್ 299ರಲ್ಲಿ ಉಲ್ಲೇಖಿಸಿರುವ ವ್ಯಕ್ತಿ ಮತ್ತು ಸರ್ಕಾರ ಎಂಬ ಪದಗಳ ನಡುವೆ ದೊಡ್ಡ ಮಟ್ಟದ ವ್ಯತ್ಯಾಸವಿದೆ. ಯಾವುದೇ ವ್ಯಕ್ತಿ ಎಂಬ ಪದ ಇರುವಲ್ಲಿ ಸರ್ಕಾರವನ್ನು ಸೇರಿಸಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅತ್ಯಗತ್ಯ ಕಟ್ಟಡ ನಿಮಾರ್ಣಕ್ಕೆ ಸರ್ಕಾರ 2016ರಲ್ಲಿ ಕೆಟಿಪಿಪಿ ಕಾಯಿದೆಯಲ್ಲಿ ಅವಕಾಶ ಮಾಡಿಕೊಟ್ಟಿದೆ. ಆದರೆ, ಅರ್ಜಿದಾರರ ಇದನ್ನು ಪ್ರಶ್ನಿಸಿಲ್ಲ. ಈ ರೀತಿಯ ಕಟ್ಟಡ ನಿರ್ಮಾಣ ಅತ್ಯಂತ ಮಹತ್ವವನ್ನು ಹೊಂದಿದ್ದು, ಈ ರೀತಿಯಲ್ಲಿ ಚಟುವಟಿಕೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದ್ದು, ಅರ್ಜಿಯಲ್ಲಿ ಪುರಸ್ಕರಿಸುವುದಕ್ಕೆ ಯೋಗ್ಯವಾದ ಕಾರಣಗಳು ಇಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.