ಬೆಂಗಳೂರು:ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ದೋಸ್ತಿ ಪಕ್ಷಗಳಲ್ಲಿ ಕೆಸರೆರಚಾಟ ಆರಂಭವಾಗಿದೆ. ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ, ಮೈತ್ರಿ ಧರ್ಮದ ಪಾಲನೆ ಮಾಡಲಾಗಿಲ್ಲವೆಂದು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ಪಕ್ಷಗಳ ನಡುವೆ ಆರೋಪ - ಪ್ರತ್ಯಾರೋಪಗಳು ಆರಂಭವಾಗಲಿವೆ ಎಂದು ರಾಜಕೀಯವಾಗಿ ನಿರೀಕ್ಷಿಸಲಾಗಿತ್ತು. ಆದರೆ ಫಲಿತಾಂಶ ಘೋಷಣೆಯಾಗುವ ಮೊದಲೇ ದೋಸ್ತಿಗಳಲ್ಲಿ ಚುನಾವಣೆ ವೇಳೆ ಮೈತ್ರಿಧರ್ಮ ಉಲ್ಲಂಘನೆ ಮಾಡಿದ ಬಗ್ಗೆ ಅಪಸ್ವರ ಕೇಳಿಬರತೊಡಗಿದೆ.
ಜೆಡಿಎಸ್ನ ಹಿರಿಯ ನಾಯಕರಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮೈಸೂರಲ್ಲಿ ಕೆಲವು ಕಡೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತಚಲಾವಣೆ ಮಾಡಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆ ನಡುವೆಯೇ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರೊಂದಿಗೆ ಡಿನ್ನರ್ ಸಭೆ ನಡೆಸಿದ ದೃಶ್ಯಾವಳಿಗಳು ಬಹಿರಂಗಗೊಂಡ ಬಳಿಕ ಎರಡೂ ಪಕ್ಷಗಳಲ್ಲಿ ಆರೋಪ ಪ್ರತ್ಯಾರೋಪಗಳು ಚುರುಕುಗೊಂಡಿವೆ.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್ ಮುಖಂಡರು ಚುನಾವಣೆ ಪ್ರಚಾರ ನಡೆಸಿಲ್ಲದ್ದರಿಂದ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆನ್ನುವ ಒತ್ತಡ ಜೆಡಿಎಸ್ನಿಂದ ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಾಮಾಣಿಕ ಪ್ರಚಾರ ನಡೆಸಿಲ್ಲ ಅವರ ವಿರುದ್ಧವೂ ಅದರಲ್ಲೂ ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಪಟ್ಟುಹಿಡಿಯಬೇಕಾಗುತ್ತದೆ ಎನ್ನುವ ಸಂದೇಶವನ್ನು ಕಾಂಗ್ರೆಸ್ ಮುಖಂಡರು ಜೆಡಿಎಸ್ ವರಿಷ್ಟರಿಗೆ ರವಾನಿಸಿದ್ದಾರೆ.
ಮಂಡ್ಯದಲ್ಲಿ ಒಂದೊಮ್ಮೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡರೆ, ಮೈಸೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಸೋತರೆ ದೋಸ್ತಿ ಪಕ್ಷಗಳ ನಡುವೆ ಆರೋಪ - ಪ್ರತ್ಯಾರೋಪಗಳು ವಿಕೋಪಕ್ಕೆ ತೆರಳಿ ದೋಸ್ತಿ ಸರ್ಕಾರಕ್ಕೆ ಧಕ್ಕೆಯಾದರೂ ಅಚ್ಚರಿಯಿಲ್ಲವೆಂದು ಮೈತ್ರಿಪಕ್ಷಗಳ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯತೊಡಗಿವೆ.