ಬೆಂಗಳೂರು:ಕೇಂದ್ರ ಸರ್ಕಾರದ ಸಹಯೋಗದ ಭಾರತ್ ನೆಟ್ ಯೋಜನೆಯನ್ನು ಚುರುಕುಗೊಳಿಸುವ ಮೂಲಕ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಗ್ರಾಮ ಪಂಚಾಯತಿಗಳಿಗೆ ನೀಡಿರುವ ಇಂಟರ್ನೆಟ್ ಸಂಪರ್ಕದ ಗುಣಮಟ್ಟ ಸುಧಾರಣೆಗೆ ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕ ಸುಧಾರಿಸುವ ಸಂಬಂಧ ಅಧಿಕಾರಿಗಳು, ವಿವಿಧ ಏಜೆನ್ಸಿ ಮುಖ್ಯಸ್ಥರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಾರತ್ ನೆಟ್ ಯೋಜನೆ ಪ್ರಗತಿ ವರದಿ ಹಾಗೂ ಸದ್ಯದ ಪರಿಸ್ಥಿತಿ ಪರಿಶೀಲಿಸಿ, ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನೆಟ್‌ವರ್ಕ್ ಗುಣಮಟ್ಟ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭಾರತ್ ನೆಟ್ ಯೋಜನೆಯನ್ನು ಬೇರೆ ಏಜೆನ್ಸಿಗೆ ಕೊಡುವ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಯೋಜನೆ ಮುಂದುವರೆಸಲಾಗುವುದು ಎಂದು ಹೇಳಿದರು.
ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಗುಣಮಟ್ಟದ ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರ ಜತೆ ಸಂಪರ್ಕ ಸುಲಭಗೊಳಿಸಲಾಗುವುದು. ಸಭೆಯಲ್ಲಿ ಪಾಲ್ಗೊಂಡ ಬಿಎಸ್‌ಎನ್‌ಎಲ್ ಮತ್ತು ಇತರ ದೂರ ಸಂಪರ್ಕ ಇಲಾಖೆಗಳು ಹಾಗೂ ಸಂಬಂಧಪಟ್ಟ ಏಜೆನ್ಸಿಗಳ ಮುಖ್ಯಸ್ಥರು ತಮಗಿರುವ ಸಮಸ್ಯೆಗಳನ್ನು ತಿಳಿಸಿದರಲ್ಲದೆ, ಕೈಗೊಂಡಿರುವ ಕಾರ್ಯಗಳ ವಿವರವನ್ನೂ ನೀಡಿದ್ದಾರೆ. ಕುಂದುಕೊರತೆ ಸರಿಪಡಿಸಿಕೊಳ್ಳಲು ಅಗತ್ಯ ಸಹಕಾರ ನೀಡುವ ಭರವಸೆ ನೀಡಲಾಗಿದೆ ಎಂದರು.