ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ ನಡುವೆ ಶಾಲಾ-ಕಾಲೇಜು ಹಾಜರಾತಿಯಲ್ಲಿ ಸುಧಾರಣೆ: ಶಿಕ್ಷಣ ಇಲಾಖೆ ಮಾಹಿತಿ - ಶಿಕ್ಷಣ ಇಲಾಕೆ

ಪ್ರಸ್ತುತ ವರ್ಷದ ಶಾಲಾರಂಭದ ಐದನೇ ದಿನವಾದ ಇಂದು ವಿದ್ಯಾರ್ಥಿಗಳ ಹಾಜರಾತಿ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಶಾಲಾ-ಕಾಲೇಜುಗಳನ್ನು ಆರಂಭಿಸಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಂತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

improvement-in-school-college-attendance-between-corona-department-of-education-data
ಕೊರೊನಾ ಭೀತಿ ನಡುವೆ ಶಾಲಾ-ಕಾಲೇಜು ಹಾಜರಾತಿಯಲ್ಲಿ ಸುಧಾರಣೆ

By

Published : Jan 5, 2021, 8:11 PM IST

ಬೆಂಗಳೂರು: ಕೋವಿಡ್ ಕಾರಣಕ್ಕೆ ಶೈಕ್ಷಣಿಕ ವರ್ಷವೇ ಶೂನ್ಯ ವರ್ಷವಾಗುತ್ತಾ ಅಂತ ಪೋಷಕರು-ವಿದ್ಯಾರ್ಥಿಗಳು ಆತಂಕದಲ್ಲಿದ್ದರು. ಆದರೆ ಕೋವಿಡ್ ತೀವ್ರತೆ ಕಡಿಮೆಯಾದ ಕಾರಣ ಜನವರಿ 1ರಿಂದ ರಾಜ್ಯದಾದ್ಯಂತ ಎಸ್​​​ಎಸ್​​​​ಎಸ್​​​ಸಿ ಹಾಗೂ ದ್ವಿತೀಯ ಪಿಯು ಕಾಲೇಜು ಆರಂಭವಾಗಿವೆ.

ಮೊದಲ ದಿನ ಶುರುವಿನಲ್ಲಿ ಬೆರಳೆಣಿಕೆಯಷ್ಟಿದ್ದ ವಿದ್ಯಾರ್ಥಿಗಳು ದಿನಕಳೆದಂತೆ ಸಂಖ್ಯೆ ಏರಿಕೆಯಾಗುತ್ತಿದೆ. ಸರ್ಕಾರಿ ಶಾಲಾ-ಕಾಲೇಜು ಮಾತ್ರವಲ್ಲದೇ ಖಾಸಗಿಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

ಕೊರೊನಾ ಭೀತಿ ನಡುವೆ ಶಾಲಾ-ಕಾಲೇಜು ಹಾಜರಾತಿಯಲ್ಲಿ ಸುಧಾರಣೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಕಿಡ್ ಇಂಟರ್ ನ್ಯಾಷನಲ್‌ ಸ್ಕೂಲ್​ನ ಸಂಯೋಜಕಿ ಶಾಂತಲಾ ದೇವಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯಲ್ಲಿರುವ ನಾನ್ ಟೀಚಿಂಗ್ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲಾಗಿದೆ. ತರಗತಿಗೆ ಶೇ. 70ರಷ್ಟು ಹಾಜರಾತಿ ಇದೆ ಎಂದರು. ಇನ್ನು ಶಿಕ್ಷಕರಿಗೆ ಕೋವಿಡ್ ಪರೀಕ್ಷೆಯಿಂದ ಹಿಡಿದು ತರಗತಿಯಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಇನ್ನು ರಾಜ್ಯದಲ್ಲಿರುವ 5,492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 4,24,250 ವಿದ್ಯಾರ್ಥಿಗಳ ಪೈಕಿ ಇಂದು 2,42,886 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ. 57.25 ಹಾಜರಿ) ಅಂತೆಯೇ 16,850 ಪ್ರೌಢ ಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ 9,29,130 ವಿದ್ಯಾರ್ಥಿಗಳ ಪೈಕಿ 4,77,051 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ. 51.34 ಹಾಜರಾತಿ) ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

6ರಿಂದ 9ನೇ ತರಗತಿಗಳಿಗೆ ನಡೆಯುತ್ತಿರುವ ಪರಿಷ್ಕೃತ ವಿದ್ಯಾಗಮ ತರಗತಿಗಳಿಗೆ ಇಂದು 6,30,557 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪ್ರಸ್ತುತ ವರ್ಷದ ಶಾಲಾರಂಭದ ಐದನೇ ದಿನವಾದ ಇಂದು ವಿದ್ಯಾರ್ಥಿಗಳ ಹಾಜರಾತಿ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಶಾಲಾ ಕಾಲೇಜುಗಳನ್ನು ಆರಂಭಿಸಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರಲ್ಲಿ ಕೊರೊನಾ ಸೋಂಕು ದೃಢ

ಬಾಗಲಕೋಟೆ ಜಿಲ್ಲೆಯ ಐವರು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಶಾಲಾರಂಭಕ್ಕೂ ಮುನ್ನವೇ ಕೊರೊನಾ ಪರೀಕ್ಷೆಯ ಫಲಿತಾಂಶ ಬಂದಿದ್ದರಿಂದ ಆ ಶಿಕ್ಷಕರು ಕ್ವಾರಂಟೈನ್‍ನಲ್ಲಿದ್ದು, ಮಕ್ಕಳ ಸಂಪರ್ಕಕ್ಕೆ ಬಂದಿಲ್ಲವಾದ್ದರಿಂದ ಶಾಲೆಗಳು ಸಮರ್ಪಕವಾಗಿ ನಡೆಯುತ್ತಿವೆ.

ಇನ್ನು ವಿಜಯಪುರ ಜಿಲ್ಲೆಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಹುಕ್ಕೇರಿ ಶೈಕ್ಷಣಿಕ ಜಿಲ್ಲೆಯಲ್ಲಿ ನಾಲ್ವರು ಶಿಕ್ಷಕರು ಹೋಂ ಕ್ವಾರಂಟೈನ್‍ನಲಿದ್ದಾರೆ.

ಕೊಪ್ಪಳ ಜಿಲ್ಲೆಯ ವಡಗನಹಳ್ಳಿ ಪ್ರಾಥಮಿಕ ಶಾಲೆ ಒಬ್ಬ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಶಾಲೆಯನ್ನು ಸ್ಯಾನಿಟೈಸ್​ ಮಾಡಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಐವರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರೆಲ್ಲರು ಹೋಂ ಕ್ವಾರಂಟೈನ್​​​​ನಲ್ಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ವಿವಿಧ 5 ಶಾಲೆಗಳ ಐವರು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಬೆಳಗಾವಿ ಜಿಲ್ಲೆ ಕಡೋಲಿ ಶಾಲೆಯ ಶಿಕ್ಷಕರಿಗೆ ಈ ತನಕ ಕೊರೊನಾ ಸೋಂಕು ದೃಢಪಟ್ಟಿಲ್ಲ. ಅವರಿಗೆ ಟೆಸ್ಟ್ ನಡೆಸಲಾಗಿದ್ದು, ಫಲಿತಾಂಶ ಬರಬೇಕಿದೆ. ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಪೂರ್ಣ ಫಲಿತಾಂಶ ಬರುವ ತನಕ ಈ ಶಿಕ್ಷಕರು ಶಾಲೆಗೆ ಹಾಜರಾಗುತ್ತಿಲ್ಲ. ನಾಳೆ ಟೆಸ್ಟ್ ಫಲಿತಾಂಶ ಬರಬಹುದಾಗಿದ್ದು, ಪಾಸಿಟಿವ್ ಬಂದಿರುವ ಈ ಯಾವ ಶಿಕ್ಷಕರೂ ಮಕ್ಕಳ ಸಂಪರ್ಕಕ್ಕೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:'ಉತ್ತರ ಪತ್ರಿಕೆಗಳ ಸ್ಕ್ಯಾಮ್ ಹಾಗೂ ವಿವಿಯ ಭೂ ಒತ್ತುವರಿ ಪ್ರಕರಣ ಸಿಐಡಿಗೆ ನೀಡಿ'

ABOUT THE AUTHOR

...view details