ಬೆಂಗಳೂರು: ಜಗತ್ತಿನ ಎಲ್ಲಾ ದೇಶಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡುತ್ತಿರುವುದು ವಿಪರ್ಯಾಸ. ಅಕ್ಷರ ಮತ್ತು ಆರೋಗ್ಯ ಇವೆರಡು ಖಾಸಗಿಯವರ ಪಾಲಾಗಿದೆ. 2000 ಇಸವಿಯಲ್ಲಿ ಕೇವಲ 6 ಸಾವಿರ ಖಾಸಗಿ ಶಾಲೆಗಳಿದ್ದವು. ಈಗ 25 ಸಾವಿರ ಖಾಸಗಿ ಶಾಲೆಗಳಿವೆ. ಖಾಸಗಿ ಶಾಲೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇವುಗಳ ನಿಯಂತ್ರಣ ಅಸಾಧ್ಯವಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ, ಮಾಜಿ ಸಚಿವ ಹೆಚ್.ವಿಶ್ವನಾಥ್ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅಭಿಪ್ರಾಯಪಟ್ಟರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಸಹಯೋಗದಲ್ಲಿ ವಿಕಾಸಸೌಧದ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಕನ್ನಡ ಎಂಬ ವಿಷಯದ ಮೇಲೆ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯ, ಮಾಜಿ ಸಚಿವ ಹೆಚ್.ವಿಶ್ವನಾಥ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಮೈಸೂರು ಶಾಸಕ ತನ್ವೀರ್ ಸೇಠ್, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಭಾಷೆ -ಸಂಸ್ಕೃತಿ ಒಂದು ನಾಣ್ಯದ ಎರಡು ಮುಖ:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ರಾಜ್ಯಭಾಷೆಯಲ್ಲಿ ಸ್ಪಂದಿಸುವ ಶಕ್ತಿಯನ್ನು ಬಹು ಸುಲಭವಾಗಿ ಮಕ್ಕಳು ಪಡೆದುಕೊಳ್ಳುತ್ತಾರೆ. ಮಕ್ಕಳ ಚಿಂತನೆ, ಕ್ರಿಯಾಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಅತ್ಯುತ್ತಮ ಸಾಧನವಾಗಿದೆ. ಮಕ್ಕಳು ಮಾತೃಭಾಷೆಯಲ್ಲಿ ಸ್ವಂತಿಕೆಯ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮಂಡಿಸಬಹುದು. ಮಾತೃಭಾಷೆಯಲ್ಲಿ ಪ್ರಭುತ್ವ ಸಾಧಿಸಿದರೆ ಮಾತ್ರ ಅನ್ಯಭಾಷೆಗಳನ್ನು ಕಲಿಸುವುದು ಮತ್ತು ಕಲಿಯುವುದು ಸುಲಭ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿಸಿಕೊಂಡು ಈ ತರಹದ ವಿಚಾರ ಸಂಕಿರಣ ಆಯೋಜಿಸಿದರೆ ಶಿಕ್ಷಣದಲ್ಲಿ ಕನ್ನಡದ ಅನುಷ್ಠಾನ ಸಾಧ್ಯವಾಗಲಿದೆ. ಇವರನ್ನು ಒಳಗೊಂಡ ಚರ್ಚೆಯಲ್ಲಿ ಶಿಕ್ಷಣದಲ್ಲಿ ಕನ್ನಡ ಬಳಕೆಯ ಕುರಿತು ಯಾವ ನಿಯಮಗಳು ರೂಪುಗೊಳ್ಳಬೇಕು ಎಂದು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಕನ್ನಡ ಕಲಿಕೆಯ ಬಗ್ಗೆ ತಿಳಿಸಬೇಕು:
ಶಾಸಕ ತನ್ವೀರ್ ಸೇಠ್ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿ ಕನ್ನಡ ಕಲಿಕೆ ಹೇಗೆ ಇರಬೇಕೆಂದು ಎಂಬುದನ್ನು ತಿಳಿಸಬೇಕು. 6 ವರ್ಷದ ವರೆಗಿನ ಮಕ್ಕಳಿಗೆ ಯಾವ ರೀತಿ ಶಾಲೆಗಳು ಇರಬೇಕೆಂದು ಸ್ಪಷ್ಟವಾಗಿ ನಿಯಮ ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಶಾಲೆಯ ಸ್ವರೂಪ ಹೇಗಿರಬೇಕೆಂಬುದನ್ನು ಅದರಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಹಾಗೂ ಶಿಕ್ಷಣದಿಂದ ಜೀವನ ರೂಪಿಸಿಕೊಳ್ಳುವುದು ಇವೆರಡಲ್ಲಿ ಯಾವುದು ಮುಖ್ಯ ಎಂಬುದು ನೋಡಬೇಕಾಗುತ್ತದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿರುವ ಕನ್ನಡ ಭಾಷಾ ಕಲಿಕೆಯ ಸಮಸ್ಯೆ ಬಗೆಹರಿಸಿದರೆ ಭಾಷಾ ಕಲಿಕಾ ವಿಚಾರದ ಸಮಸ್ಯೆ ಬಗೆಹರಿಯಲಿದೆ ಎಂದರು.