ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡಲ್ಲ: ಸಚಿವ ಮಧು ಬಂಗಾರಪ್ಪ

Imposition of Hindi : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ತಿಳಿಸಿದ್ದಾರೆ.

ಮಧು ಬಂಗಾರಪ್ಪ
ಮಧು ಬಂಗಾರಪ್ಪ

By ETV Bharat Karnataka Team

Published : Dec 4, 2023, 4:56 PM IST

Updated : Dec 4, 2023, 5:33 PM IST

ಸಚಿವ ಮಧು ಬಂಗಾರಪ್ಪ

ಬೆಳಗಾವಿ/ಬೆಂಗಳೂರು : ಮಾತೃಭಾಷೆ ಅಥವಾ ರಾಜ್ಯ ಭಾಷೆಯ ಕಡ್ಡಾಯ ಶಿಕ್ಷಣ ವಿಚಾರ ಕುರಿತು ವಿಧಾನಸಭೆಯ ಉಭಯ ಸದನಗಳಿಂದ ಅಂಗೀಕಾರಗೊಂಡಿರುವ ರಾಜ್ಯದ ಮಸೂದೆಗೆ ಇನ್ನೂ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕದ ಕಾರಣ, ಕಡ್ಡಾಯ ಶಿಕ್ಷಣ ವಿಚಾರದಲ್ಲಿ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. ಆದರೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015ರಲ್ಲಿ ಉಭಯ ಸದನಗಳಲ್ಲಿ ಮಂಡನೆ ಆಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ 1-5 ತರಗತಿವರೆಗೆ ಮಾತೃಭಾಷೆ- ರಾಜ್ಯಭಾಷೆ ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಿ ಅಂಗೀಕರಿಸಲಾಗಿದ್ದ ಮಸೂದೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ. ಕೇಂದ್ರ ಸರ್ಕಾರ ಮಾತೃಭಾಷೆಯ ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಮಸೂದೆ ಒಪ್ಪದ ಕೇಂದ್ರ ಸುಪ್ರಿಂಕೋರ್ಟ್ ತೀರ್ಪು ಆಧರಿಸಿ, ರಾಜ್ಯದ ವಿಧೇಯಕ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಿಳಿಸಿದೆ ಎನ್ನುವ ವಿಷಯವನ್ನು ಸದನದ ಗಮನಕ್ಕೆ ತಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಯು ಬಿ ವೆಂಕಟೇಶ್, ನಮ್ಮ ಮಕ್ಕಳಿಗೆ ನಾವೇ ಕನ್ನಡ ಕಲಿಸದೇ ಆದ್ಯತೆ ನೀಡದಿದ್ದರೆ ಹೇಗೆ?. ಇದಕ್ಕೆ ಸರ್ಕಾರ ಏನಾದರೂ ದಾರಿ ಹುಡುಕಬೇಕು. ಕೇಂದ್ರಕ್ಕೆ ಸಂಸದರು ಹೋಗಿ ಒತ್ತಾಯ ಮಾಡಿ ಏನಾದ್ರೂ ಪರಿಹಾರ ಮಾಡಬೇಕು. ಎಂಟು ವರ್ಷಗಳಾದರೂ ವಿಧೇಯಕಕ್ಕೆ ಅನುಮೋದನೆ ಸಿಕ್ಕಿಲ್ಲ ಎಂದರು.

ಇದಕ್ಕೆ ಸ್ಪಷ್ಟೀಕರಣ ನೀಡಿದ ಸಚಿವ ಮಧು ಬಂಗಾರಪ್ಪ, ನಮ್ಮ ನಿಲುವು ಸ್ಪಷ್ಟವಾಗಿದೆ. ಆದರೆ ಪ್ರಥಮ ಭಾಷೆ, ದ್ವಿತೀಯ ಭಾಷೆ ಕನ್ನಡ ಕಡ್ಡಾಯ ಮಾಡಿದ್ದೇವೆ. ಆದರೆ ಮೀಡಿಯಂ ಆಫ್ ಸ್ಟಡೀಸ್ ಸುಪ್ರಿಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಡ್ಡಾಯ ಮಾಡುವುದಕ್ಕೆ ಬರುವುದಿಲ್ಲ ಎಂದರು. ಇದಕ್ಕೆ ಅಸಮಾಧಾನಗೊಂಡ ಯು ಬಿ ವೆಂಕಟೇಶ್​, ಹಾಗಾದ್ರೆ ಕೇಂದ್ರದವರು ಹಿಂದಿ ಹೇರಿಕೆ ಹೇಗೆ ಮಾಡ್ತಾರೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡುವುದಕ್ಕೆ ಬರುವುದಿಲ್ಲ. ಹಿಂದಿ ಹೇರಿಕೆ ನಾವು ಕೂಡ ಒಪ್ಪುವುದಿಲ್ಲ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಹುದ್ದೆ ಹೆಚ್ಚಳಕ್ಕೆ ಕ್ರಮ:ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಯಾರಿಗೂ ತೊಂದರೆಯಾಗದಂತೆ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ ಲೋಪ ಸರಿಪಡಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನಮ್ಮ ಸರ್ಕಾರ ಬಂದ ನಂತರ 16 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಅದರಲ್ಲಿ 4 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕಕ್ಕೆ ಹಾಕಿದ್ದೇವೆ. ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಿಂದಾಗಿ 37 ಸಾವಿರ ಶಿಕ್ಷಕರು ಬೇರೆ ಬೇರೆ ಕಡೆಗೆ ವರ್ಗಾವಣೆ ಮೂಲಕ ಹೋಗಲಿದ್ದಾರೆ. ಹಾಗಾಗಿ ಯಾದಗಿರಿ, ರಾಯಚೂರಿಗೆ ಶಿಕ್ಷಕರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ನಿಜ. ಆದರೂ ಕಲ್ಯಾಣ ಕರ್ನಾಟಕಕ್ಕೆ ಕೋರ್ಟ್ ತೀರ್ಮಾನ ಆದ ತಕ್ಷಣ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ. ಅದರಂತೆ ಕಲಬುರಗಿ ಆಯುಕ್ತ ಕಚೇರಿಯಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದು ಹೇಳಿದರು.

ಸದಸ್ಯರು ಮೈಸೂರು ಭಾಗದಲ್ಲಿ 12 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಈ ಅನುಪಾತ ಕಡಿಮೆ ಮಾಡಿ ನಮ್ಮ ಭಾಗಕ್ಕೂ ಹೆಚ್ಚಿನ ಶಿಕ್ಷಕರ ಹುದ್ದೆ ಮಂಜೂರು ಮಾಡಬೇಕು ಎಂದಿದ್ದಾರೆ. ನಮ್ಮ ಸರ್ಕಾರದಿಂದ ಈ ಬಗ್ಗೆ ಹೆಚ್ಚಿನ ಒತ್ತನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಲಾಗುತ್ತದೆ. ಮುಂದಿನ ದಿನದಲ್ಲಿ ಶಿಕ್ಷಕರು ಮತ್ತು ಇಲಾಖೆಯಡಿ ಇತ್ಯಾದಿ ಸೌಲಭ್ಯದ ವಿಚಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮುಂದಿನ ವರ್ಷಕ್ಕೆ ಹೆಚ್ಚಿನ ಅನುದಾನ ನಮ್ಮ ಇಲಾಖೆಯಿಂದ ನೀಡಲಾಗುತ್ತದೆ. ಮೈಸೂರು ಭಾಗದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೂ ವಿದ್ಯಾರ್ಥಿಗಳ ಅನುಪಾತದಂತೆ ಶಿಕ್ಷಕರ ನೇಮಕದ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರದಲ್ಲಿ ಯಾರಿಗೂ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಏಕರೂಪ ಶಿಷ್ಯ ವೇತನ ಜಾರಿ:ಏಕರೂಪ ಶಿಷ್ಯವೇತನ ವ್ಯವಸ್ಥೆ ಜಾರಿಗೆ ತರುವ ಚಿಂತನೆ ಸರ್ಕಾರದ ಮುಂದಿದ್ದು, ಸ್ಟೇಟ್ ಸ್ಕಾಲರ್​ಶಿಪ್ ಪೋರ್ಟಲ್ ಮೂಲಕ ಈ ಕುರಿತು ಆದೇಶ ಮಾಡಲು ಕ್ರಮ ವಹಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾನಾಯಕ ಬೋಸರಾಜು ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ, ರಾಜ್ಯದಲ್ಲಿ ಬೇರೆ ಬೇರೆ ಇಲಾಖೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುತ್ತದೆ. ಆದರೆ ಎಲ್ಲ ಸ್ಕಾಲರ್ ಶಿಪ್ ಒಂದೇ ಸೆಂಟ್ರಲೈಸ್ಡ್ ಪೂಲ್ ಮಾಡುವುದಕ್ಕೆ ಯಾಕೆ ಸಾಧ್ಯವಿಲ್ಲ?. ಒಂದೇ ಕೇಂದ್ರಿತ ವ್ಯವಸ್ಥೆ ಅಡಿಯಲ್ಲಿ ಎಲ್ಲ ಸ್ಕಾಲರ್ ಶಿಪ್ ವ್ಯವಸ್ಥೆ ತೆಗೆದುಕೊಂಡು ಬನ್ನಿ, ಸ್ಕಾಲರ್ ಶಿಪ್ ಪಡೆಯುವುದನ್ನು ಸರಳೀಕರಣ ಮಾಡಿ ಎಂದರು.

ಉನ್ನತ ಶಿಕ್ಷಣ ಸಚಿವ ಸುಧಾಕರ್ ಪರವಾಗಿ ಸಭಾನಾಯಕ ಉತ್ತರಿಸಲು ಮುಂದಾದರು. ಉನ್ನತ ಶಿಕ್ಷಣ ಸಚಿವರು ಪೂರ್ವನಿಯೋಜಿತ ಕಾರ್ಯಕ್ರಮ ಉಲ್ಲೇಖಿಸಿ ಗೈರಿಗೆ ಅನುಮತಿ ಕೋರಿದ್ದಾರೆ ಎನ್ನುವುದನ್ನು ಸಭೆಗೆ ತಿಳಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರ ಈ ಧೋರಣೆಗೆ ಗರಂ ಆದರು.

ಬಿಜೆಪಿ ಜೆಡಿಎಸ್ ಸದಸ್ಯರು ಕೂಡ ಗರಂ ಆದರು. ಸದನ ಇದ್ದಾಗ ಪೂರ್ವನಿಯೋಜಿತ ಕಾರ್ಯಕ್ರಮ ಇರಬಾರದು ಎಂದು ಸಭಾಪತಿ ತಾಕೀತು ಮಾಡಿದರು. ನಂತರ ನಾಳೆಯಿಂದ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವ ಭರವಸೆಯೊಂದಿಗೆ ಸದನಕ್ಕೆ ಉತ್ತರಿಸಿದ ಸಭಾನಾಯಕ ಬೋಸರಾಜು, ಏಕ ಶಿಷ್ಯ ವೇತನ ವ್ಯವಸ್ಥೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ ಮೂಲಕ ಮಾಡಲು ಆದೇಶ ಮಾಡಲಾಗಿದೆ. ಸಂಬಂಧಪಟ್ಟ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ಏಕರೂಪ ವಿದ್ಯಾರ್ಥಿ ವೇತನ ಕುರಿತು ಸಚಿವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ: ಸಚಿವ ದಿನೇಶ್​ ಗುಂಡೂರಾವ್

Last Updated : Dec 4, 2023, 5:33 PM IST

ABOUT THE AUTHOR

...view details