ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿ ಜಾರಿ ಕುರಿತು ನಾಳೆ ಆರೋಗ್ಯ ಸಚಿವರು ಮತ್ತು ಕಂದಾಯ ಸಚಿವರು ತಜ್ಞರ ಸಮಿತಿ ಸದಸ್ಯರ ಜೊತೆ ಅಧಿಕಾರಿಗಳ ಸಭೆ ನಡೆಸಲಿದ್ದು, ಸಭೆ ನಂತರ ರಾಜ್ಯದಲ್ಲಿ ಯಾವ ರೀತಿ ಕಟ್ಟೆಚ್ಚರ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಕುರಿತು ಕೇಂದ್ರದಿಂದ ಹಲವಾರು ಸೂಚನೆ ಬಂದಿದೆ. ಇದರ ಜೊತೆಗೆ ನಾವೂ ರಾಜ್ಯದಿಂದ ಕೆಲನಿರ್ಣಯ ಮಾಡಬೇಕಿದೆ. ಕೋವಿಡ್ ವಸ್ತುಸ್ಥಿತಿ ನೋಡಿದರೆ ಅನಾವಶ್ಯಕ ಗಾಬರಿ ಆಗುವುದು ಬೇಡ ಎಂದು ಹೇಳಿದರು.
ನಮ್ಮ ಜಾಗೃತಿಯಲ್ಲಿ ನಾವು ಇರುವುದು ಅವಶ್ಯಕ ಇದೆ. ಕೋವಿಡ್ ಕುರಿತ ಜಾಗತಿಕ ಪರಿಣಾಮ ನಮ್ಮ ಮೇಲೂ ಬೀರಿವೆ ಹಾಗಾಗಿ ನಾಳೆ ನಡೆಯಲಿರುವ ಸಭೆಯಲ್ಲಿ ಅಧಿಕಾರಿಗಳ ಜೊತೆ ತಜ್ಞರು ಇರಲಿದ್ದು ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಹೇಳಿದರು.
ಕೊರೊನಾ ಬಗ್ಗೆ ಎಚ್ಚರವಿರಲಿ ಎಂದು ಮೋದಿ ಕರೆ:ವರ್ಷದ ಕೊನೆಯ ಸಂಚಿಕೆಯ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಬೇರೆ ರಾಷ್ಟ್ರಗಳಲ್ಲಿ ರೂಪಾಂತರಿ ಕೊರೊನಾ ವೈರಸ್ ಅಬ್ಬರಿಸುತ್ತಿದ್ದು. ದೇಶದ ಜನರು ಈ ಬಗ್ಗೆ ಎಚ್ಚರವಾಗಿ ಇರಬೇಕು ಎಂದು ಪ್ರಧಾನಿ ಅವರು ಮನವಿ ಮಾಡಿದ್ದಾರೆ. ಎಚ್ಚರಿಕೆಯಿಂದಿರುವ ಮೂಲಕ ಮಾಸ್ಕ್ ಧಾರಣೆ, ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸಲಹೆ ನೀಡಿದರು.
ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬಿಎಫ್.7 ಕೋವಿಡ್ ವೇರಿಯಂಟ್ ಭಾರತೀಯರಲ್ಲೂ ಆತಂಕ ಮೂಡಿಸಿದೆ. ಬಿಎಫ್.7 ರೂಪಾಂತರವು ಚೀನಾ ಮಾತ್ರವಲ್ಲದೇ ಅಮೆರಿಕಾ, ಇಂಗ್ಲೇಂಡ್, ಬೆಲ್ಜಿಯಂ, ಪ್ರಾನ್ಸ್ ಹೀಗೆ ಹಲವಾರು ರಾಷ್ಟ್ರಗಳಿಗೆ ಹರಡುತ್ತಿದೆ. ಈಗಾಗಲೇ ಭಾರತದಲ್ಲು ಹೊಸ ರೂಪಾಂತರಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದು ಮಿತಿಮೀರಿ ಹರುಡುವುದಕ್ಕಿಂತ ಮೊದಲು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಕೊರೊನಾ ಹರಡುವಿಕೆ ತಡೆಯಬೇಕಾಗಿದೆ.