ಬೆಂಗಳೂರು: ಕೊರೊನಾ ವೈರಸ್ ಎಂಬ ಕಣ್ಣಿಗೆ ಕಾಣದ ಮಹಾಮಾರಿ ಈ ವರ್ಷ ಪ್ರತಿಯೊಂದು ಕ್ಷೇತ್ರವನ್ನೂ ಇನ್ನಿಲ್ಲದಂತೆ ಕಾಡಿತು. ಇದಕ್ಕೆ ರಾಜ್ಯದ ನ್ಯಾಯಾಂಗ ವ್ಯವಸ್ಥೆಯೂ ಹೊರತಾಗಿ ಉಳಿಯಲಿಲ್ಲ. ಹೈಕೋರ್ಟ್ ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯ ಭಾಗವಾದ ರಾಜ್ಯದ ವಿಚಾರಣಾ ನ್ಯಾಯಾಲಯಗಳು, ವಕೀಲ ಸಮುದಾಯ, ಕೊನೆಗೆ ನ್ಯಾಯಾಧೀಶರನ್ನೂ ಕೊರೊನಾ ಬೆನ್ನತ್ತಿ ಕಾಡಿತು. ಅದರ ನಡುವೆಯೂ ಹೈಕೋರ್ಟ್ 2020ರಲ್ಲಿ ಗಮನಾರ್ಹ ತೀರ್ಪುಗಳನ್ನು ನೀಡಿದ್ದು ವಿಶೇಷ. ಅವುಗಳ ಒಂದು ಕಿರುನೋಟ ಇಲ್ಲಿದೆ.
ಪ್ರಕರಣ-01:
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಜೂನ್ 25ರಂದು ನೀಡಿದ ತೀರ್ಪು ದೇಶದಾದ್ಯಂತ ಚರ್ಚೆಗೆ ಗ್ರಾಸವಾಯಿತು. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಸುಸ್ತಾಗಿ ಮಲಗಿಬಿಟ್ಟೆ ಎಂದು ಹೇಳುವುದು ಮರ್ಯಾದೆಗೆಟ್ಟ ಮಹಿಳೆಯ ಲಕ್ಷಣ. ಭಾರತೀಯ ನಾರಿಯ ನಡವಳಿಕೆಯಲ್ಲ ಎಂದು ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಯಿತು.
ಪ್ರಕರಣದ ಹಿನ್ನೆಲೆ ಅರಿತವರು ನ್ಯಾಯಮೂರ್ತಿಗಳ ನಿಲುವು ಸರಿ ಎಂದರೆ, ದೇಶದ ಮಹಿಳಾಪರ ಸಂಘಟನೆಗಳು ವಿರೋಧಿಸಿ ನೇರವಾಗಿ ನ್ಯಾಯಮೂರ್ತಿಗಳಿಗೇ ಪತ್ರ ಬರೆದವು. ಅಂತಿಮವಾಗಿ ತೀರ್ಪಿನಲ್ಲಿದ್ದ ವಿವಾದಿತ ಸಾಲುಗಳನ್ನು ಕೈಬಿಟ್ಟ ಬಳಿಕ ಗದ್ದಲ ತಣ್ಣಗಾಯಿತು.
ಪ್ರಕರಣ-02:
ಕೊರೊನಾ ಕಾರಣಕ್ಕಾಗಿ ಖಾಸಗಿ ಶಾಲೆಗಳು ಆನ್ಲೈನ್ ಕ್ಲಾಸ್ ಆರಂಭಿಸಿದ ಬಳಿಕ ಅವುಗಳಿಗೆ ತಡೆ ನೀಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಜುಲೈ 9ರಂದು ತಡೆ ನೀಡಿತು. ಕೊನೆಗೆ ಹೈಕೋರ್ಟ್ ಮಾರ್ಗಸೂಚಿಗಳ ಅನ್ವಯ ಮತ್ತೆ ಆನ್ಲೈನ್ ತರಗತಿಗಳು ಆರಂಭವಾದವು. ಅದೇ ರೀತಿ ಕೊರೊನಾ ಸಂದರ್ಭದಲ್ಲಿ ಸಿಇಟಿ ಪರೀಕ್ಷೆ ನಡೆಸಲು ಮುಂದಾಗಿದ್ದ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿಗಳನ್ನು ಜುಲೈ 30ರಂದು ವಜಾಗೊಳಿಸುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎದುರಾಗಿದ್ದ ಅಡ್ಡಿಗಳನ್ನು ಸಿಜೆ ಎ.ಎಸ್.ಓಕ ನೇತೃತ್ವದ ಪೀಠ ನಿವಾರಣೆ ಮಾಡಿತು.
ಪ್ರಕರಣ-03:
ಕೊರೊನಾ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸದೆ ಆಂತರಿಕ ಮೌಲ್ಯಮಾಪನ ಹಾಗೂ ಹಿಂದಿನ ವರ್ಷ ಗಳಿಸಿರುವ ಅಂಕಗಳ ಆಧಾರದ ಮೇಲೆ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಯುಜಿಸಿ ಹೇಳಿದ್ದರೂ ಸರ್ಕಾರ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಕೆಲ ವಿದ್ಯಾರ್ಥಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಯುಜಿಸಿ ಸಲಹೆ ನೀಡಬಹುದಷ್ಟೇ ಎಂದಿದ್ದ ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಪೀಠ, ಪರೀಕ್ಷೆ ನಡೆಸುವ ನಿರ್ಧಾರ ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಸೆಪ್ಟೆಂಬರ್ 25ರಂದು ತೀರ್ಪು ನೀಡುವ ಮೂಲಕ ಓದದೇ ಪಾಸಾಗಲು ಚಿಂತಿಸಿದ್ದ ವಿದ್ಯಾರ್ಥಿಗಳ ಕನಸಿಗೆ ತಣ್ಣೀರೆರಚಿತ್ತು.
ಪ್ರಕರಣ-04:
ಇನ್ನು ಕೊರೊನಾ ನಡುವೆಯೇ ವರ್ಚುಯಲ್ ಕೋರ್ಟ್ ಕಲಾಪದ ಮೂಲಕವೇ ಸುದೀರ್ಘ 61 ಗಂಟೆಗಳ ಕಾಲ ಫ್ರಾಂಕ್ಲಿನ್ ಟೆಂಪಲ್ಟನ್ ಪ್ರಕರಣವನ್ನು ವಿಚಾರಣೆ ನಡೆಸಿ ಮ್ಯೂಚುವಲ್ ಫಂಡ್ ಹೂಡಿಕೆದಾರರ ಹಿತರಕ್ಷಣೆ ಮಾಡಿ ಅಕ್ಟೋಬರ್ 24ರಂದು ನೀಡಿದ ತೀರ್ಪು ಇಡೀ ದೇಶದ ಗಮನ ಸೆಳೆದಿತ್ತು. ಈ ಪ್ರಕರಣವನ್ನು ಹೆಚ್ಚು ದಕ್ಷ ಹಾಗೂ ಕಾನೂನು ಸೂಕ್ಷ್ಮತೆ ಇರುವ ನ್ಯಾಯಮೂರ್ತಿಗಳೇ ವಿಚಾರಣೆ ನಡೆಸಬೇಕು ಎಂಬ ಕಾರಣಕ್ಕೆ ರಾಜ್ಯ ಹೈಕೋರ್ಟ್ಗೆ ವರ್ಗವಣೆ ಮಾಡಲಾಗಿತ್ತು. ಪ್ರಕರಣ ವಿಚಾರಣೆ ವೇಳೆ ದೇಶದ ಕಾನೂನು ತಜ್ಞರಲ್ಲದೆ, ವಿದೇಶಿ ಕಾನೂನು ತಜ್ಞರೂ ಭಾಗವಹಿಸಿದ್ದು ವಿಶೇಷವಾಗಿತ್ತು.