ಬೆಂಗಳೂರು: ರಾಜ್ಯದಲ್ಲಿ ಹೊಸ ಡಿಜಿಟಲೀಕರಣ ನೀತಿಯ ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಪಾಲಿಸಿಯನ್ನು ಜಾರಿಗೆ ತರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಹೊಸ ಡಿಜಿಟಲೀಕರಣ ಜಾರಿಗೆ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊಸ ಡಿಜಿಟಲೀಕರಣ ನೀತಿಯನ್ನು ಜಾರಿಗೆ ತರಲಿದ್ದೇವೆ. ತಜ್ಞರು ಸಲಹೆಗಳನ್ನು ನೀಡಿದರೆ ಆದಷ್ಟು ಶೀಘ್ರವಾಗಿ ಡಿಜಿಟಲ್ ನೀತಿ ಜಾರಿಗೆ ತರಲು ಅನುಕೂಲವಾಗುತ್ತದೆ. ಅದೇ ರೀತಿ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪ್ಯಾಡ್ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
‘ಜಡ್ಡುಕಟ್ಟಿದ ವ್ಯವಸ್ಥೆಗೆ ಮುಕ್ತಿ’
ಪ್ರಸ್ತುತ ಶಿಕ್ಷಣದಲ್ಲಿರುವ ಜಡ್ಡುಕಟ್ಟಿದ ವ್ಯವಸ್ಥೆ ಮತ್ತು ನೀತಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿಮೋಚನೆ ಸಿಕ್ಕಿದಂತಾಗುತ್ತದೆ. ಶಿಕ್ಷಣಕ್ಕೆ ಇಂದು ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು, ಇಂದು ಮಾತ್ರವಲ್ಲ ಮುಂದಿನ ಜನಾಂಗಕ್ಕೂ ಇದು ಸ್ವಾತಂತ್ರ್ಯವೇ ಆಗಲಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ವಿಯಾದರೆ, ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸುವ ರೀತಿಯಲ್ಲೇ ಪ್ರತಿ ವರ್ಷ ಆಗಸ್ಟ್ 23 ರಂದು ಶಿಕ್ಷಣ ದಿನಾಚರಣೆ ಆಚರಿಸುವ ದಿನ ಬರುತ್ತದೆ ಎಂದರು.
ಅನುಷ್ಠಾನವೇ ದೊಡ್ಡ ಸವಾಲು
ಶಿಕ್ಷಣ ವ್ಯವಸ್ಥೆಯ ಮೂಲಭೂತ ಬದಲಾವಣೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಸಾಕ್ಷ್ಯಿಯಾಗಲಿದೆ. ಅನುಷ್ಠಾನವೇ ದೊಡ್ಡ ಸವಾಲಾಗಿದೆ. ಅದನ್ನು ಬುದ್ದಿವಂತಿಕೆಯಿಂದ ಅನುಷ್ಠಾನ ಮಾಡಬೇಕು. ಇಲಾಖೆ ಆಧಾರಿತ ಶಿಕ್ಷಣದ ಬದಲಿಗೆ ವಿದ್ಯಾರ್ಥಿ ಆಧಾರಿತ ಶಿಕ್ಷಣ ವ್ಯವಸ್ಥೆಯಾಗಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಎನ್ಇಪಿ ಸಾಕಷ್ಟು ಬದಲಾವಣೆ ತರಲಿದೆ. ವಿದ್ಯಾರ್ಥಿಗಳ ಕ್ರಿಯಾತ್ಮಕತೆ, ಜ್ಞಾನವನ್ನು ಪೂರ್ಣಪ್ರಮಾಣದ ಅಭಿವ್ಯಕ್ತಿಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಯ ಕ್ರಿಯಾಶೀಲತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ತಂತ್ರಜ್ಞಾನವನ್ನೂ ಮೀರಿಸುವ ತಂತ್ರಾಂಶ
ಈ ಹಿಂದೆ ಮೌಲ್ಯಾಧಾರಿತ ಜ್ಞಾನ ಇತ್ತು. ಆ ಜ್ಞಾನಕ್ಕೆ ವಿಜ್ಞಾನ ಸೇರಿತು. ಇದರಿಂದ ಸಂಶೋಧನೆ, ಅನ್ವೇಷಣೆ ಆರಂಭವಾಯಿತು. ವಿಜ್ಞಾನದ ನಂತರ ತಂತ್ರಜ್ಞಾನ ಬಂತು. ತಂತ್ರಜ್ಞಾನವನ್ನೂ ಮೀರಿಸುವ ತಂತ್ರಾಂಶ ವಿಜ್ಞಾನ ಬಂದಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಾಗ ಮಾತ್ರ ಪರಿವರ್ತನೆ ಸಾಧ್ಯ. ಮಕ್ಕಳಿಗೆ ತಂತ್ರಾಂಶ ಜ್ಞಾನವನ್ನು ನೀಡಬೇಕು ಎಂದು ಸಲಹೆ ನೀಡಿದರು.
ಅನುಷ್ಠಾನದಲ್ಲಿ ಸವಾಲುಗಳು : ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಶಿಕ್ಷಣ ನೀತಿಯು ಹೊಸ ಜ್ಞಾನಾಧಾರಿತ ವ್ಯವಸ್ಥೆಯನ್ನು ರಚನೆ ಮಾಡಲಿದೆ. ಜತೆಗೆ ಅನುಷ್ಠಾನದಲ್ಲಿರುವ ಹಲವು ಸವಾಲುಗಳಿಗೆ ಸೂಕ್ಷ್ಮ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಕರ್ನಾಟಕ ಸಾಕಷ್ಟು ಮುಂದಿದೆ. ನೀತಿ ಅನುಷ್ಠಾನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಬೇಕು ಎಂದು ಸಲಹೆ ನೀಡಿದರು.