ದೇವನಹಳ್ಳಿ(ಬೆಂಗಳೂರು): ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದ ಮೂಲಕ ದೇಶ-ವಿದೇಶಗಳಿಂದ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ. ಇದೀಗ ತ್ವರಿತಗತಿಯಲ್ಲಿ ಕೋವಿಡ್ ಲಕ್ಷಣ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನ ಪತ್ತೆ ಹಚ್ಚಲು 'ಚಾಕೊ ಸ್ಕ್ರೀನಿಂಗ್' ಯಂತ್ರವನ್ನ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಚಾಕೊ ಸ್ಕ್ರೀನಿಂಗ್' ಅಳವಡಿಕೆ ಪ್ರಯಾಣಿಕರ ಆರೋಗ್ಯ ಸಮಸ್ಯೆಯ ದೃಷ್ಟಿಯಿಂದ ಚಾಕೊ ಎನ್ನುವ ಅತ್ಯಾಧುನಿಕ ಸ್ಕ್ರೀನಿಂಗ್ ಚೆಸ್ಟ್ ಎಕ್ಸರೇ ಸಿಸ್ಟಮ್ ಅಳವಡಿಸಲಾಗಿದೆ. ಚೆನ್ನೈ ಮೂಲದ ಕಾರ್ಪೊರಿಯಲ್ ಹೆಲ್ತ್ ಸಲ್ಯೂಷನ್(ಸಿಹೆಚ್ಎಸ್) ಕಂಪನಿ ಏಷ್ಯಾದಲ್ಲಿಯೇ ಮೊದಲ ಬಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಾಕೊ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಅಳವಡಿಸಿದೆ.
ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ಟೆಸ್ಟ್ ಮಾಡಿಸಿ ವರದಿ ಬರುವ ವೇಳೆಗೆ ಎದೆಯ ಎಕ್ಸರೇಯನ್ನ ಮಾಡಿ ರೋಗದ ಲಕ್ಷಣಗಳಿವೆಯಾ ಎಂಬುದರ ಫಲಿತಾಂಶವನ್ನು ಈ ಸ್ಕ್ಯಾನಿಂಗ್ ನೀಡುತ್ತದೆ. ಜತೆಗೆ ಏರ್ಪೋರ್ಟ್ನಲ್ಲಿ ಸಾಂಕ್ರಾಮಿಕ ರೋಗಗಳನ್ನ ತಡೆಗಟ್ಟಲು ಈ ಸಿಸ್ಟಮ್ ಸಹಕಾರಿಯಾಗಲಿದೆ ಎಂದು ಸಿಹೆಚ್ಎಸ್ ಕಂಪನಿ ತಿಳಿಸಿದೆ. ಚಾಕೊ ಸಿಸ್ಟಮ್ ಮೂಲಕ ಪ್ರಯಾಣಿಕರು ಅತೀ ವೇಗವಾಗಿ ಫಲಿತಾಂಶವನ್ನ ಪಡೆಯಬಹುದಾಗಿದೆ. ಜತೆಗೆ ಯಾವುದೇ ಲಕ್ಷಣವಿಲ್ಲದೆ ಆಗಮಿಸುವ ಪ್ರಯಾಣಿಕರಲ್ಲಿಯೂ ಚಾಕೋ ಸ್ಕ್ರೀನಿಂಗ್ ಎಕ್ಸರೇ ಸಿಸ್ಟಮ್ ರೋಗ ಲಕ್ಷಣಗಳನ್ನ ಕಂಡು ಹಿಡಿಯಬಲ್ಲದು ಎಂದು ಸಿಹೆಚ್ಎಸ್ ತಿಳಿಸಿದೆ.
ಈ ವಿನೂತನ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲು ಸರ್ಕಾರಗಳಿಗೆ ಮನವಿ ಮಾಡಿದ್ದೇವೆ. ಈಗಾಗಲೇ ಪ್ರಯಾಣಿಕರಿಗೆ ಉಚಿತವಾಗಿ ಸ್ಕ್ರೀನಿಂಗ್ ಹಾಗೂ ಚೆಸ್ಟ್ ಎಕ್ಸರೇ ಮಾಡಲಾಗುತ್ತಿದ್ದು, ಕೈಗೆಟಕುವ ದರದಲ್ಲಿ ವೈದ್ಯಕೀಯ ಪರೀಕ್ಷೆಯನ್ನ ಮುಂದಿನ ದಿನಗಳಲ್ಲಿ ಮಾಡುವುದಾಗಿ ಸಿಹೆಚ್ಎಸ್ ಕಂಪನಿ ತಿಳಿಸಿದೆ.
ಇದನ್ನೂ ಓದಿ:ದ.ಏಷ್ಯಾದಲ್ಲೇ ಮೊದಲ ಬಾರಿ 'ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್' ಪರಿಚಯಿಸಿದ ಕೆಐಎಎಲ್