ಬೆಂಗಳೂರು: "ರಾಜ್ಯ ಕಾಂಗ್ರೆಸ್ ನಾಯಕರಿಗೆ ಬದ್ಧತೆ ಇದ್ದರೆ ಮೊದಲು ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಇದೇ ವೇಳೆ, "ಕೇಂದ್ರದ ಮೇಲೆ ಬೆರಳು ತೋರುವ ಮೊದಲು ಮ್ಯಾಚಿಂಗ್ ಗ್ರ್ಯಾಂಟ್ ಬಿಡುಗಡೆ ಮಾಡಿ" ಎಂದರು.
ಬಸವನಗುಡಿಯ ಉತ್ತರಾದಿ ಮಠದಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಜಯಶ್ರೀ ಅರವಿಂದ ಅವರು ಸಂಗೀತ ಸಂಯೋಜನೆ ಮಾಡಿರುವ ಶ್ರೀರಾಮನ ಕುರಿತ ಗೀತೆಗಳ ಧ್ವನಿ ಸುರುಳಿಯನ್ನು ಬೊಮ್ಮಾಯಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, "ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವ ಸಂದರ್ಭದಲ್ಲಿ ರಾಮನ ಕುರಿತ ಹಾಡು ಬಿಡುಗಡೆ ಆಗುತ್ತಿರುವುದು ಸಂತಸ ತಂದಿದೆ" ಎಂದು ಅಭಿಪ್ರಾಯಪಟ್ಟರು.
"ರಾಜ್ಯದ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲವನ್ನೂ ಕಾಂಗ್ರೆಸ್ ತಿರುಚುವ ಕೆಲಸ ಮಾಡುತ್ತಿದೆ. ಅನುದಾನದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ದೊಡ್ಡ ಕೆಲಸ ಮಾಡಿದ್ದಾರೆ. 14ನೇ ಹಣಕಾಸಿಗಿಂತ 15ನೇ ಹಣಕಾಸು ಯೋಜನೆಯಲ್ಲಿ 1 ಲಕ್ಷ ಕೋಟಿ ರೂ. ಹೆಚ್ಚಿಗೆ ಬಂದಿದೆ. ಕೇವಲ ಆಯುಷ್ಮಾನ್ ಭಾರತ ಯೊಜನೆ ಅಡಿಯಲ್ಲಿ 62 ಲಕ್ಷ ಜನರಿಗೆ ಹಣ ಬಂದಿದೆ. ಇವರ ಅವಧಿಯಲ್ಲಿ ಆ ಯೋಜನೆಯನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕಿದ್ದರು. ನಂತರ ಯೋಜನೆ ಒಳ್ಳೆಯದಿದೆ ಎಂದು ಒಪ್ಪಿಕೊಂಡರು" ಎಂದು ವಾಗ್ದಾಳಿ ನಡೆಸಿದರು.