ಕರ್ನಾಟಕ

karnataka

ETV Bharat / state

ಹೆಚ್ಚು ಸಾಲ ಮಾಡದೆ, ಜನರ ಮೇಲೆ ತೆರಿಗೆ ಭಾರ ಹಾಕದೇ, ಗ್ಯಾರಂಟಿಗಳನ್ನ ಜಾರಿ ಮಾಡಿ:ಬೊಮ್ಮಾಯಿ ಸಲಹೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ಕಾಂಗ್ರೆಸ್​ ನವರು ಕೊಟ್ಟ ಮಾತುಗಳನ್ನು ಜನರು ನಂಬಿದ್ದು, ತೆರಿಗೆ ಭಾರ ಹಾಕದೇ ಗ್ಯಾರಂಟಿಗಳನ್ನು ಜಾರಿ ಮಾಡಿ ಎಂದು ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

By

Published : Jul 6, 2023, 8:32 PM IST

ಜನರಿಗೆ ತೆರಿಗೆ ಹೊರೆ ಹಾಕದೇ ಗ್ಯಾರಂಟಿಗಳನ್ನು ಜಾರಿ ಮಾಡಿ

ಬೆಂಗಳೂರು :ಜನರ ಮೇಲೆ ತೆರಿಗೆ ಹೊರೆ ಹಾಕದೇ, ಹೆಚ್ಚು ಸಾಲ ಮಾಡದೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು,‌ ಜನರಿಗೆ ತೆರಿಗೆ ಹೊರೆ ಹಾಕಿದರೆ ಜನ ವಿರೋಧಿ ಗ್ಯಾರಂಟಿಗಳಾಗುತ್ತವೆ. ಹೆಚ್ಚು ಸಾಲ ತೆಗೆದು ಕೊಳ್ಳದೇ, ಜನರ ಮೇಲೆ ತೆರಿಗೆ ಹಾಕದೇ ಗ್ಯಾರಂಟಿಗಳನ್ನು ಕೊಡಬೇಕು. ಮಾಡಿಲ್ಲ ಅಂದರೆ ಜನರ ಶ್ರಮದ ಹಣವನ್ನು ಕಿತ್ತುಕೊಂಡಂತೆ ಆಗುತ್ತದೆ ಎಂದು ಹೇಳಿದರು.

ರಾಜ್ಯಪಾಲರ ಭಾಷಣ ನೋಡಿದಾಗ ಜನರ ನಿರೀಕ್ಷೆ ಈಡೇರಿಸುವ ಭಿನ್ನ ಆಡಳಿತ ನೀಡುವ ಭರವಸೆ ಇಲ್ಲ. ಚರ್ವಿತಚರ್ವಣ ಭಾಷಣ ಇದಾಗಿದೆ. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ಸಾಮಾನ್ಯ ಆಶ್ವಾಸನೆಗಳನ್ನು ವಿಶೇಷ ಎಂದು ಬಿಂಬಿಸಿದ್ದಾರೆ‌ ಎಂದು ಅಸಮಾಧಾನ ಹೊರಹಾಕಿದ ಬೊಮ್ಮಾಯಿ ಅವರು, ಗ್ಯಾರಂಟಿಗಳಿಗೆ ಜನರು ಮರುಳಾಗಿದ್ದಾರೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್​ ನವರು ಮನ್ನಣೆ ಕೊಟ್ಟಿದ್ದಾರೆ.

ಜನರು ನೀವು ಕೊಟ್ಟ ಮಾತುಗಳನ್ನು ಹೆಚ್ಚು ನಂಬಿದ್ದಾರೆ. ಗೃಹ ಲಕ್ಷ್ಮಿ, ಎಲ್ಲರಿಗೂ 10 ಕೆಜಿ ಉಚಿತ ಅಕ್ಕಿ, ಎಲ್ಲರಿಗೂ ಗೃಹ ಜ್ಯೋತಿ, ಡಿಗ್ರಿಯಾದವರಿಗೆ ನಿರುದ್ಯೋಗ ಭತ್ಯೆ ಅಂತ‌ ಹೇಳಿದ್ದೀರಿ. ಈಗ ಎಲ್ಲ ಗ್ಯಾರಂಟಿಗಳಿಗೂ ಕಂಡೀಷನ್ ಹಾಕಿ. ಎಲ್ಲದಕ್ಕೂ ಏಜೆಂಟ್​ಗಳು ಹುಟ್ಟಿಕೊಂಡಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

ನೀವು ಘೋಷಿಸಿದ ಗ್ಯಾರಂಟಿಗಳ ಪೈಕಿ ಕೇವಲ ಬಸ್ ಪ್ರಯಾಣ ಮಾತ್ರ ಆರಂಭಿಸಿದ್ದೀರಿ. ಇದೀಗ 10 ಕೆಜಿ ಅಕ್ಕಿ ಬದಲು ದುಡ್ಡು ಕೊಡುವುದಾಗಿ ಹೇಳಿದ್ದೀರಿ. ನೀವು ಕೊಡುವ ಹಣಕ್ಕೆ ಎರಡೂವರೆ ಕೆಜಿ ಅಕ್ಕಿ ಬರುತ್ತದೆ. ಇದು ಬಡವರಿಗೆ ಪರಿಣಾಮ ಬೀರುತ್ತದೆ. ನೀವು ಘೋಷಣೆ ಮಾಡಿರುವಂತೆ ಎಲ್ಲ ಯೋಜನೆಗಳ ಜಾರಿಗೆ 52 ಸಾವಿರ ಕೋಟಿ ಖರ್ಚಾಗುತ್ತದೆ ಅಂತ ಹೇಳಿದ್ದೀರಿ. ಆದರೆ, ಕಂಡೀಷನ್ ಹಾಕಿರೋದರಿಂದ ಸುಮಾರು 20 ರಿಂದ 25 ಸಾವಿರ ಕೊಟಿ ಮಾತ್ರ‌ ಖರ್ಚಾಗಬಹುದು ಎಂದು ಕಾಂಗ್ರೆಸ್​ ವಿರುದ್ದ ಕಿಡಿಕಾರಿದರು.

ರಾಜ್ಯದಲ್ಲಿ ಜಿಎಸ್ ಟಿ ಸಂಗ್ರಹ ಹೆಚ್ಚಾಗಿದೆ. ಇತರ ಟ್ಯಾಕ್ಸ್ ಸಂಗ್ರಹ ಕೂಡ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಹೆಚ್ಚಿನ ಸಾಲ ತೆಗೆದುಕೊಳ್ಳುವ ಅಗತ್ಯವಿಲ್ಲ. ನಾನು ಉಳಿತಾಯದ ಬಜೆಟ್ ಮಂಡನೆ ಮಾಡಿದ್ದೇನೆ. 78 ಸಾವಿರ ಕೋಟಿ ಸಾಲ ತೆಗೆದುಕೊಳ್ಳಲು ಅವಕಾಶ ಇದೆ‌. ಅಷ್ಟು ಮಾತ್ರ ತೆಗೆದುಕೊಂಡರೆ ಸಾಕು. ಮೂಲ ಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಮೀಸಲಿಟ್ಟ ಹಣವನ್ನು ಬಳಕೆ‌ ಮಾಡಬಹುದು ಎಂದರು.

ನಾಳೆ ಬಜೆಟ್​ ಮಂಡನೆವಾಗುತ್ತಿದ್ದು, ಎಲ್ಲ ನೀರಾವರಿ ಯೋಜನೆ, ಶಿಕ್ಷಣ ಇಲಾಖೆ ಯೋಜನೆ, ಕೃಷಿ ಹಾಗೂ ಸೇವಾ ವಲಯಕ್ಕೆ ಆದ್ಯತೆ ನೀಡಬೇಕು. ಗ್ಯಾರಂಟಿಗಳಿಗೆ ಮೊದಲ ಅಧಿವೇಶನದಲ್ಲೇ ತಾತ್ವಿಕವಾಗಿ ಒಪ್ಪಿಗೆ ತಗೊಂಡು ಜಾರಿ ಮಾಡಿದ್ದೀರಾ. ಅದಾದ ಮೇಲೆ ಒಂದೊಂದೇ ಕಂಡಿಷನ್ ಹಾಕುತ್ತಾ ಬಂದಿದ್ದೀರಿ. ನೀವು ಚುನಾವಣೆ ಪೂರ್ವದಲ್ಲಿ ಮಾತು ಕೊಟ್ಟಿದ್ದಕ್ಕೂ ಅನುಷ್ಠಾನ ಮಾಡೋದಕ್ಕೂ ಅಜ ಗಜಾಂತರವಿದೆ . ಕೊವೀಡ್ ನಂತರ ದೇಶದಲ್ಲಿ ಆರ್ಥಿಕತೆ ಹೆಚ್ಚಾಗಿದ್ದು, ರಾಜ್ಯದಲ್ಲೂ ಆದಾಯ ಹೆಚ್ಚಾಗಿದೆ. ಜಿಎಸ್​ಟಿ ಸಂಗ್ರಹ ಕೂಡ ಹೆಚ್ಚಾಗಿದೆ. ಹೀಗಾಗಿ ಗ್ಯಾರಂಟಿಗಳಿಂದ ಜನರ ಮೇಲೆ ಯಾವುದೇ ತೆರಿಗೆ ಅಂತೂ ಹಾಕಬೇಡಿ. ಎಲ್ಲ ಯೋಜನೆಗಳಿಗೆ ಹೆಚ್ಚು ಅನುದಾನವನ್ನು ನಾವು ಕೊಟ್ಟಿದ್ದೇವೆ. ಅದನ್ನು ಮುಂದುವರಿಸಬೇಕು ಎಂದು ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ :ಸಭಾಧ್ಯಕ್ಷರ ಕನ್ನಡ ಭಾಷಾ ಪದ ಪ್ರಯೋಗದ ಬಗ್ಗೆ ಹಾಸ್ಯ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್

ABOUT THE AUTHOR

...view details