ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 1,200 ಮಂದಿ ಪೌರಕಾರ್ಮಿಕರು ಹಾಗೂ ಹೌಸ್ ಕೀಪಿಂಗ್ ಸಿಬ್ಬಂದಿಗೆ ಇಂದು ಮೇಯರ್ ಆಯುರ್ವೇದ ತಜ್ಞ ಡಾ. ಗಿರಿದರ ಕಜೆ ಸಿದ್ದಪಡಿಸಿರುವ "ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ"ಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು.
ನಗರದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಹಾಗೂ ಹೌಸ್ ಕೀಪಿಂಗ್ ಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಉಚಿತವಾಗಿ ನೀಡಿದ ಡಾ. ಗಿರಿದರ್ ಕಜೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಹಾಪೌರರು ತಿಳಿಸಿದರು.
ದೇಶದಾದ್ಯಂತ ಕೊರೋನಾ ವೈರೆಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ನಿಯಂತ್ರಿಸಬೇಕಾದರೆ ಎಲ್ಲರೂ ಎಚ್ಚರಿಕೆಯಿಂದಿರಬೇಕು. ಕೋವಿಡ್ ಸೋಂಕನ್ನು ಹೋಗಲಾಡಿಸಲು ಡಾ. ಗಿರಿದರ ಕಜೆ ರವರು ಆಯುರ್ವೇದಿಕ್ ಮಾತ್ರೆಗಳನ್ನು ಸಿದ್ದಪಡಿಸಿದ್ದು, 1,200 ಮಂದಿಗಾಗುವಷ್ಟು ಮಾತ್ರೆಗಳನ್ನು ಉಚಿತವಾಗಿ ನೀಡಿದ್ದಾರೆ.
ಆಯುರ್ವೇದ ತಜ್ಞ ಡಾ. ಗಿರಿದರೆ ಕಜೆ ಮಾತನಾಡಿ, ಕೋವಿಡ್-19 ಸೋಂಕು ತಡೆಯಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಸಿದ್ದಪಡಿಸಲಾಗಿದೆ. ಇಂದು 1,200 ಮಂದಿಗೆ ಉಚಿತವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ವಿತರಿಸಲಾಗಿದೆ ಎಂದರು.
ಭವ್ಯ ಎಂಬ ಹೆಸರಿನ 60 ಮಾತ್ರೆಗಳು ಮತ್ತು ಸ್ವಾತ್ಮ್ಯ ಎಂಬ ಹೆಸರಿನ 30 ಮಾತ್ರೆಗಳು ಡಬ್ಬಿಯಲ್ಲಿದ್ದು, 2 ಭವ್ಯ ಹಾಗೂ 1 ಸಾತ್ಮ್ಯ ಮಾತ್ರೆಗಳನ್ನು ಪ್ರತಿನಿತ್ಯ ಮೂರು ಬಾರಿ ಊಟದ ಬಳಿಕ 10 ದಿನಗಳ ಕಾಲ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಈ ಮಾತ್ರೆಗಳಿಂದ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ. ಈಗಾಗಲೇ 17,000 ಮಾತ್ರೆಗಳನ್ನು ವಿತರಿಸಲಾಗಿದೆ. ರಾಜ್ಯದಾದ್ಯಂತ 70,000 ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.