ಆನೇಕಲ್/ಮತ್ತಿಗೆರೆ: ಪರ ಪುರುಷನ ಮೋಹಕ್ಕೆ ಬಿದ್ದ ಪತ್ನಿಯೋರ್ವಳು ತನ್ನ ಪತಿಯ ಜೀವವನ್ನೆ ತೆಗೆಯಲು ಯತ್ನಿಸಿದ ಘಟನೆ ಆನೇಕಲ್ ಹೊಸೂರು ಗಡಿ ಭಾಗದ ತಮಿಳುನಾಡಿನ ಮತ್ತಿಗೆರೆಯಲ್ಲಿ ನಡೆದಿದೆ.
ಅನೈತಿಕ ಸಂಬಂಧದ ಮೋಹ: ಪತಿಯನ್ನೇ ಮುಗಿಸಲೆತ್ನಿಸಿದ ಪತ್ನಿ - undefined
ಪರ ಪುರುಷನೊಂಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಆತನ ಮೋಹಕ್ಕೆ ಬಿದ್ದು ಪತಿಯನ್ನೆ ಕೊಲ್ಲಲು ಮುಂದಾಗಿದ್ದು, ವಾಟರ್ ಹೀಟರ್ ಇಟ್ಟು ಸುಡಲು ಯತ್ನಿಸಿ ವಿಫಲಗೊಂಡಿರುವ ಘಟನೆ ಆನೇಕಲ್ ಹೊಸೂರು ಗಡಿ ಭಾಗದ ತಮಿಳುನಾಡಿನ ಮತ್ತಿಗೆರೆಯಲ್ಲಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಮದುಗಾನಪಲ್ಲಿ ಗ್ರಾಮದ ಜ್ಯೋತಿ ಎಂಬ ಮಹಿಳೆ ತನ್ನ ಪತಿ ಶಾಂತರಾಜುನನ್ನು ಕೊಲೆ ಮಾಡಲು ಸಂಚು ಮಾಡಿದ್ದು, ವಾಟರ್ ಹೀಟರ್ ಬಳಸಿ ಪತಿಯ ಅಂತ್ಯಕ್ಕೆ ಹೊಂಚು ಹಾಕಿದ್ದಳು ಎನ್ನಲಾಗುತ್ತಿದೆ. ಜ್ಯೋತಿಯ ಪ್ರಯತ್ನ ಕೈ ಕೊಟ್ಟ ಪರಿಣಾಮ ಪತಿ ಕೂದಲೆಳೆಯಲ್ಲಿ ಪಾರಾಗಿದ್ದಾನೆ. ಇದಕ್ಕೂ ಮುನ್ನ ಈಕೆ ಪ್ರಿಯಕರನ ಸಹಚರರೊಂದಿಗೆ ಸೇರಿ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಪ್ರಯತ್ನ ಕೂಡ ಮಾಡಿದ್ದಳು. ಆದರೆ ಈ ಪ್ಲಾನ್ ವಿಫಲವಾದ ಕಾರಣ ಇಂದು ಮತ್ತೆ ಕೊಲೆ ಯತ್ನ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಗಾಯಗೊಂಡಿರುವ ಶಾಂತರಾಜು ಹೊಸೂರಿನ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆಗಾಗಿ ದಾಖಲುಗೊಂಡಿದ್ದು, ಪತ್ನಿಯ ವಿರುದ್ಧ ಮತ್ತಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಾಯಾಳುವಿನ ಹೇಳಿಕೆಯಂತೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಜ್ಯೋತಿ ಪತ್ತೆಗೆ ಬಲೆ ಬೀಸಿದ್ದಾರೆ.