ಕರ್ನಾಟಕ

karnataka

ETV Bharat / state

ಎಎಪಿಯಿಂದ 'ಕಾವೇರಿ ನಮ್ಮದು' ಧರಣಿ ಸತ್ಯಾಗ್ರಹ: ತಕ್ಷಣವೇ ಅಧಿವೇಶನ ಕರೆದು ಕಾವೇರಿ ವಿಚಾರ ಚರ್ಚಿಸುವಂತೆ ಮುಖ್ಯಮಂತ್ರಿ ಚಂದ್ರು ಒತ್ತಾಯ - ಮುಖ್ಯಮಂತ್ರಿ ಚಂದ್ರು

ಬೆಂಗಳೂರು ನಗರದ ಫ್ರೀಡಂ ಪಾರ್ಕ್​ನಲ್ಲಿಂದು ಆಮ್ ಆದ್ಮಿ ಪಕ್ಷದಿಂದ ಕಾವೇರಿ ನಮ್ಮದು ಧರಣಿ ಸತ್ಯಾಗ್ರಹವನ್ನು ಮಾಡಲಾಯಿತು.

ಆಮ್ ಆದ್ಮಿ ಪಕ್ಷದಿಂದ ಕಾವೇರಿ ನಮ್ಮದು ಧರಣಿ ಸತ್ಯಾಗ್ರಹ
ಆಮ್ ಆದ್ಮಿ ಪಕ್ಷದಿಂದ ಕಾವೇರಿ ನಮ್ಮದು ಧರಣಿ ಸತ್ಯಾಗ್ರಹ

By ETV Bharat Karnataka Team

Published : Oct 4, 2023, 5:53 PM IST

ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು

ಬೆಂಗಳೂರು : ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಾದ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯಲು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಿದೆ. ಈಗಾಗಲೇ ರಾಜ್ಯ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದು, ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಕಾವೇರಿ ಸಮಸ್ಯೆ ಬಗೆಹರಿಯುವ ತನಕ ಪ್ರತಿದಿನ ಧರಣಿ ಮಾಡಲು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹಾಗೂ ರೈತ ಮುಖಂಡ ಕುರುಬೂರು ಶಾಂತಕುಮಾರ್​ ನೇತೃತ್ವದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ತೀರ್ಮಾನಿಸಿದೆ. ಅದರಂತೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು ಆಮ್ ಆದ್ಮಿ ಪಕ್ಷದಿಂದ ಮಾಡುತ್ತಿರುವ 'ಕಾವೇರಿ ನಮ್ಮದು' ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆಗೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಮೂರು ಪಕ್ಷಗಳು ಕಾರಣ. ಸಿಎಂ ಸಿದ್ದರಾಮಯ್ಯ ತಕ್ಷಣ ಅಧಿವೇಶನ ಕರೆಯಬೇಕು. ನೀರು ಬಿಡುತ್ತಿಲ್ಲ ಎಂದು ಅವರು ಹೇಳುತ್ತಿದ್ದರೂ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಈ ಬಗ್ಗೆ ಅಧಿವೇಶನಲ್ಲಿ ಅವರು ನಿಜ ಏನೆಂದು ಹೇಳಬೇಕು ಎಂದು ಒತ್ತಾಯಿಸಿದರು.

ಬಂದ್‌ಗೆ ಜನರೇ ಬೆಂಬಲ ಕೊಟ್ಟರು : ಹಲವು ದಶಕಗಳಿಂದ ಕಾವೇರಿ ನೀರು ಹಂಚಿಕೆಯಲ್ಲಿ ಸಮಸ್ಯೆ ಇದೆ. ನೀರನ್ನು ನಿಲ್ಲಿಸಲು ಒತ್ತಾಯಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬಂದ್ ಮಾಡಬೇಕಾಯಿತು. ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಕೇಂದ್ರ ಸರ್ಕಾರ, ಪ್ರಾಧಿಕಾರಗಳು ಮತ್ತು ನ್ಯಾಯಾಲಯ ಕೂಡ ರಾಜ್ಯದ ವಿಚಾರದಲ್ಲಿ ತಾರತಮ್ಯ ತೋರುತ್ತಿದ್ದು, ತಮಿಳುನಾಡಿಗೆ ಹೆಚ್ಚಿನ ಬೆಂಬಲ ನೀಡುತ್ತಿವೆ ಎನ್ನುವ ದೂರು ಕೇಳಿಬಂದಿದೆ ಎಂದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಬೆಂಗಳೂರಿಗೆ ಹೆಚ್ಚು ಸಮಸ್ಯೆಯಾಗುವ ಕಾರಣ ಎಲ್ಲಾ ಭಾಗಗಳಿಗೆ ತೊಂದರೆ ಕೊಡುವುದು ಬೇಡ ಎಂದು ಕಾವೇರಿ ಜಲಾನಯನ ವ್ಯಾಪ್ತಿಯ ಪ್ರದೇಶದಲ್ಲಿ ಮಾತ್ರ ಬಂದ್ ಮಾಡಲಾಯಿತು. ಜನ ಕೂಡ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದರು.

ಸಮಸ್ಯೆ ಸರಿಪಡಿಸಲು ಇಚ್ಛಾಶಕ್ತಿ ಕೊರತೆ: ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಸಮಸ್ಯೆಯನ್ನು ಸರಿಪಡಿಸಲು ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದ್ದು, ಸಮಸ್ಯೆ ಬಗೆಹರಿಸಲು ವಿಫಲವಾಗಿದೆ. ಸುಪ್ರೀಂಕೋರ್ಟ್, ಕಾವೇರಿ ಪ್ರಾಧಿಕಾರ ಮತ್ತು ನಿರ್ವಹಣಾ ಸಮಿತಿ ಮಾಡಿದ್ದೇ ಹಠ ಎನ್ನುವಂತೆ ವರ್ತಿಸುತ್ತಿವೆ. ನೀರಿಲ್ಲ ಎಂದರೂ, ನೀರು ಬಿಡಿ ಎನ್ನುತ್ತಿದ್ದಾರೆ. ಮತ್ತೆ ಮೂರು ಸಾವಿರ ಕ್ಯೂಸೆಕ್ ನೀರು ಬಿಡಿ ಎಂದು ನಿರ್ವಹಣಾ ಸಮಿತಿ ಹೇಳಿದ್ದನ್ನೇ ಪ್ರಾಧಿಕಾರ ಕೂಡ ಹೇಳಿದೆ. ಈಗ ಸುಪ್ರೀಂಕೋರ್ಟ್ ಕೂಡ ನಾವು ತಜ್ಞರಲ್ಲ, ಪ್ರಾಧಿಕಾರಕ್ಕೆ ಹೋಗಿ ಎನ್ನುತ್ತಾರೆ. ನಾವೇ ಕೊಟ್ಟಿರುವ ಆದೇಶ ಯಾಕೆ ವಾಪಸ್ ಪಡೆಯುವುದು ಎಂದು ಪ್ರಾಧಿಕಾರ ನೀರು ಬಿಡಲು ಆದೇಶಿಸಿದೆ ಎಂದರು.

ಈಗ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಕ್ಕೆ ಸಂಕಷ್ಟ ಇದೆ ಎಂದು ಪ್ರತಿಪಾದಿಸಬೇಕು. ಪ್ರಾಧಿಕಾರಕ್ಕೆ ಮತ್ತೆ ಮನವಿ ಸಲ್ಲಿಸಬೇಕು. ರಾಜ್ಯಕ್ಕೆ ಅನುಕೂಲವಾಗುವ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಬೇಕು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸುಗ್ರೀವಾಜ್ಞೆ ಹೊರಡಿಸಿದಂತೆ ಸರ್ಕಾರ ಅಧಿವೇಶನ ಕರೆದು ಚರ್ಚೆ ಮಾಡಿ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಾಲ ಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ ಸಹವಾನಿ, ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ಶಶಿಧರ್ ಆರಾಧ್ಯ , ಬೆಂಗಳೂರು ಮಹಿಳಾ ಅಧ್ಯಕ್ಷೆ ವೀಣಾ, ಮಹಾಲಕ್ಷ್ಮಿ, ಉಸ್ಮಾನ್, ಪುಟ್ಟಣ್ಣ, ಸಿದ್ದು, ಅನಿಲ್ ನಾಚಪ್ಪ ಸೇರಿದಂತೆ ಪಕ್ಷದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ:ಕುಡಿಯಲು ನೀರು ಕೇಳಿದ್ರೆ ಸರ್ಕಾರ ಸಾರಾಯಿ ಕೊಡಲು ಮುಂದಾಗಿದೆ: ಮುಖ್ಯಮಂತ್ರಿ ಚಂದ್ರು

ABOUT THE AUTHOR

...view details