ಐಎಂಎಗೆ ಹಣ ಹೂಡುವಂತೆ ಪ್ರಚೋದನೆ: ಹರ್ಷಗುಪ್ತ ಸಲ್ಲಿಸಿದ್ದ ಪತ್ರ ರೋಷನ್ ಬೇಗ್ಗೆ ಮುಳುವು? - roshan beg provoking people to invest in IMA
ಐಎಂಎ ವಂಚನೆ ಪ್ರಕರಣ ಸಂಬಂಧ ಸಕ್ಷಮ ಅಧಿಕಾರಿ ಹರ್ಷಗುಪ್ತಾ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಹಾಗೂ ರೋಷನ್ ಬೇಗ್ ವ್ಯವಹಾರದ ಬಗ್ಗೆ ಉಲ್ಲೇಖ ಮಾಡಿದ್ದು, ಸದ್ಯ ಮಾಜಿ ಸಚಿವ ರೋಷನ್ ಬೇಗ್ಗೆ ಇದೂ ಕೂಡ ಮುಳುವಾಗಲಿದೆ ಎನ್ನಲಾಗಿದೆ.
ಹರ್ಷಗುಪ್ತ ಕಂದಾಯ ಇಲಾಖೆಗೆ ಪತ್ರ
ಬೆಂಗಳೂರು:ಐಎಂಎ ವಂಚನೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ರೋಷನ್ ಬೇಗ್ ಒಂದೊಂದು ಮುಖವಾಡ ಕಳಚಿ ಬೀಳುತ್ತಿದೆ. ಐಎಂಎಯಲ್ಲಿ ಹಣ ಹೂಡುವಂತೆ ಮಾಜಿ ಶಾಸಕ ಬೇಗ್ ಜನರಿಗೆ ಪ್ರೇರೇಪಿಸುತ್ತಿದ್ದು, ಐಎಂಎಯ ಹಗರಣದ ಸ್ಟಾರ್ ಕ್ಯಾಂಪೇನರ್ ಆಗಿ ವಂಚನೆಯ ಫಲಾನುಭವಿ ಆಗಿದ್ದ ವಿಚಾರವನ್ನ ಪತ್ರದ ಮುಖಾಂತರ ಬಯಲು ಮಾಡಲಾಗಿದೆ. ಇದು ಕೂಡ ರೋಷನ್ ಬೇಗ್ ಪಾಲಿಗೆ ಮುಳುವಾಗಿದೆ.
ಇದೇ ನವೆಂಬರ್ 19 ರಂದು ಸಕ್ಷಮ ಅಧಿಕಾರಿ ಹರ್ಷಗುಪ್ತ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಅದರಲ್ಲಿ ಮನ್ಸೂರ್ ಖಾನ್ ಹಾಗೂ ರೋಷನ್ ಬೇಗ್ ವ್ಯವಹಾರದ ಬಗ್ಗೆ ಉಲ್ಲೇಖ ಮಾಡಿದ್ದಾರೆ.ಒಂದೇ ಕಚೇರಿ ಇಟ್ಟುಕೊಂಡು ಇಬ್ಬರು ವ್ಯವಹಾರ ಮಾಡಿದ್ದು, ರೋಷನ್ ಬೇಗ್ ಐಎಂಎ ಕಂಪನಿಯಲ್ಲಿ ಹೆಚ್ಚು ಜನ ಹಣ ಹೂಡಿಕೆ ಮಾಡಲು ಪ್ರಚೋದಿಸಿದ್ದ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ.
ರೋಷನ್ ಬೇಗ್ ಮಾಲೀಕತ್ವದ ಸಿಯಾಸಾತ್ ಡೈಲಿಯಲ್ಲಿ ಕೂಡ ಐಎಂಎ ಸಂಬಂಧ ಕಾರ್ಯಕ್ರಮ ಮಾಡುತ್ತಿದ್ದರು. ಐಎಂಎ ಮಾಲೀಕ ಮನ್ಸೂರ್ ಖಾನ್ ಹಮ್ಮಿಕೊಳ್ಳುತ್ತಿದ್ದ ಎಲ್ಲ ಕಾರ್ಯಕ್ರಮಗಳಿಗೂ ರೋಷನ್ ಬೇಗ್ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದರು. ರೋಷನ್ ಬೇಗ್ ಕಾರ್ಯಕ್ರಮದಲ್ಲಿನ ಭಾಷಣ ನಂಬಿ ಜನ ಕೋಟಿ ಕೋಟಿ ಹೂಡಿಕೆ ಮಾಡಿದ್ದರು. ಆದರೆ, ಕೊನೆಗೆ ಹಣ ನೀಡದೆ ವಂಚನೆ ಮಾಡಿದ್ದು, ವಂಚನೆ ಹಣದಲ್ಲಿ ರೋಷನ್ ಬೇಗ್ಗೆ ದೊಡ್ಡ ಪಾಲು ಸೇರಿತ್ತು. ಅಲ್ಲದೇ ರೋಷನ್ ಬೇಗ್ಗೆ 400 ಕೋಟಿ ಹಣ ಕೊಟ್ಟಿರುವುದಾಗಿ ಮನ್ಸೂರ್ ಆರೋಪ ಮಾಡಿರುವ ವಿಚಾರವನ್ನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.