ಬೆಂಗಳೂರು :ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಸಿಬಿಐಗೆ ಮಧ್ಯಂತರ ಆದೇಶ ನೀಡಿದೆ.
ತಮ್ಮ ವಿರುದ್ಧ ಸಿಬಿಐ ಅಧಿಕಾರಿಗಳು ದಾಖಲಿಸಿರುವ ಪ್ರಕರಣವನ್ನು ಹಾಗೂ ವಿಶೇಷ ನ್ಯಾಯಾಲಯ ಕೈಗೊಂಡಿರುವ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಹೇಮಂತ್ ನಿಂಬಾಳ್ಕರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ ತನಿಖೆಗೆ ತಡೆಯಾಜ್ಞೆ ನೀಡಲು ಮುಂದಾಯಿತು.
ಇದಕ್ಕೆ ಆಕ್ಷೇಪಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರು, ಐಎಂಎ ವಂಚನೆ ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ. ಪ್ರಕರಣದ ತನಿಖೆಯನ್ನು 2021ರ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಸಿಬಿಐ ಪರ ನಾವು ಭರವಸೆ ನೀಡಿದ್ದೇವೆ. ಇಂತಹ ಸಂದರ್ಭದಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳ ತನಿಖೆಗೆ ತಡೆಯಾಜ್ಞೆ ನೀಡಿದರೆ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಒಂದೇ ಪ್ರಕರಣದಲ್ಲಿ ಎರಡು ಪ್ರತ್ಯೇಕ ಪೀಠಗಳು ವಿಭಿನ್ನ ನಿರ್ದೇಶನಗಳನ್ನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ನಿಂಬಾಳ್ಕರ್ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡುವ ನಿರ್ಧಾರದಿಂದ ಹಿಂದೆ ಸರಿದ ಪೀಠ ತನಿಖೆ ಮುಂದುವರಿಸಲು ಸಮ್ಮತಿಸಿತು. ಆದರೆ, ನ್ಯಾಯಾಲಯದ ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು. ಆರೋಪಪಟ್ಟಿ ಸಲ್ಲಿಸಬಾರದು ಎಂದು ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿತು.
ಐಎಂಎ ವಂಚನೆ ಹಗರಣದ ಸಂಬಂಧ ದೂರುಗಳು ದಾಖಲಾಗುವ ಸಂದರ್ಭದಲ್ಲಿ ಸಿಐಡಿಯ ಆರ್ಥಿಕ ಅಪರಾಧ ತನಿಖಾ ವಿಭಾಗದ ಮುಖ್ಯಸ್ಥರಾಗಿ( ಐಜಿಪಿ) ಹೇಮಂತ್ ನಿಂಬಾಳ್ಕರ್ ಇದ್ದರು. ಈ ವೇಳೆ ನಿಂಬಾಳ್ಕರ್ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಿಬಿಐ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಇದನ್ನು ಪ್ರಶ್ನಿಸಿ ನಿಂಬಾಳ್ಕರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.