ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್ನನ್ನ ಇಡಿ ಅಧಿಕಾರಿಗಳು ದೆಹಲಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 6.20ಕ್ಕೆ ಕರೆತಂದ ಅಧಿಕಾರಿಗಳು ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ವಂಚಕ ಮನ್ಸೂರ್ ಬೆಂಗಳೂರಿಗೆ... ಶಾಂತಿನಗರ ಕಚೇರಿಗೆ ಕರೆತಂದ ಇಡಿ ಅಧಿಕಾರಿಗಳು
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ನನ್ನ ದೆಹಲಿಯಿಂದ ಬೆಂಗಳೂರಿಗೆ ಕರೆತರಲಾಗಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ಮನ್ಸೂರ್ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ದೆಹಲಿಯಲ್ಲಿ ಬಂಧಿಸಲ್ಪಟ್ಟಿದ್ದ ಮನ್ಸೂರ್ನನ್ನು ಕೆಲ ಕಾನೂನು ಪ್ರಕ್ರಿಯೆ ಮುಗಿಸಿ, ಅಲ್ಲಿನ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಈಗಾಗಲೇ ಐಎಂಎ ಮೂಲಕ ಮನ್ಸೂರ್ ಖಾನ್ 200 ಕೋಟಿ ರೂ.ಗೂ ಹೆಚ್ಚು ಅಕ್ರಮ ಆಸ್ತಿ ಮಾಡಿರುವುದು ಇಡಿ ತನಿಖೆಯಲ್ಲಿ ಪತ್ತೆಯಾಗಿದ್ದು, ವಿಚಾರಣೆಯಿಂದ ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸದ್ಯ ಇಡಿ ಅಧಿಕಾರಿಗಳ ವಶದಲ್ಲಿದ್ದು, ಇಡಿ ವಿಚಾರಣೆ ಮುಗಿದ ನಂತರ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದ್ದಾರೆ. ಯಾಕೆಂದರೆ ಈಗಾಗಲೇ ಐಎಂಎ ವಂಚನೆ ಪ್ರಕರಣದಲ್ಲಿ ಹೂಡಿಕೆದಾರರು ಕಮರ್ಷಿಯಲ್ ಠಾಣೆಯಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ದೂರು ದಾಖಲಿಸಿದ್ದಾರೆ.