ಬೆಂಗಳೂರು: ಐಎಂಎ ಕಂಪೆನಿಯ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಮುಂದುವರೆಸಿರುವ ಎಸ್‌ಐಟಿ ತನಿಖಾಧಿಕಾರಿಗಳು ಬಂಧಿತ ಡಿಸಿ ವಿಜಯಶಂಕರ್ ಅವರಿಂದ 2.5 ಕೋಟಿ ರೂ. ಹಾಗೂ ಅಡೋನಿ ಎಂಬ ನಿರ್ಮಾಣ ಸಂಸ್ಥೆಯಿಂದ 1.5 ಕೋಟಿ ರೂ.ನಗದನ್ನು ವಶಪಡಿಸಿಕೊಂಡಿದೆ.
ಐಎಂಎ ವಂಚನೆ ಪ್ರಕರಣ: 2.5 ಕೋಟಿ ರೂ.ವಶಪಡಿಸಿಕೊಂಡ ಎಸ್ಐಟಿ ಜಿಲ್ಲಾಧಿಕಾರಿಯಾಗಿದ್ದ ವಿಜಯ್ ಶಂಕರ್ ಫ್ಯ್ಲಾಟ್ ಮತ್ತು ನಿವೇಶ ಖರೀದಿಸಲು ಬಿಲ್ಡರ್ ಒಬ್ಬರಿಗೆ ನೀಡಲಾಗಿದ್ದ 1.5 ಕೋಟಿ ರೂ. ಹಣವನ್ನು ಎಸ್‌ಐಟಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಇದಲ್ಲದೇ ವಿಜಯ್‌ಶಂಕರ್ ಮತ್ತೊಂದು ವ್ಯವಹಾರದ ಸಂಬಂಧ ಬೇರೊಬ್ಬರಿಂದ ಇನ್ನೂ ಒಂದು ಕೋಟಿ ಹಣ ಲಂಚವಾಗಿ ಪಡೆದುಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿರುವುದರಿಂದ ಎಸ್‌ಐಟಿ ಅಧಿಕಾರಿಗಳು ಆ ಹಣವನ್ನೂ ವಶಪಡಿಸಿಕೊಂಡಿದ್ದಾರೆ.
ಐಎಂಎ ಸಂಸ್ಥೆಯು ಅಡೋನಿ ಎಂಬ ಸಂಸ್ಥೆಯ ಸಹಭಾಗಿತ್ವದೊಂದಿಗೆ ನಗರದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಪಡೆಯಲು ಕರಾರು ಮಾಡಿಕೊಂಡಿತ್ತು. ಈ ಸಂಬಂಧ ಐಎಂಎ ಕಂಪನಿಯು ಮುಂಗಡವಾಗಿ 1.5 ಕೋಟಿ ರೂ.ಹಣವನ್ನು ಅಡೋನಿ ಸಂಸ್ಥೆಗೆ ನೀಡಿದ್ದ ಮಾಹಿತಿ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಡೋನಿ ಸಂಸ್ಥೆಯು 1.5 ಕೋಟಿ ಹಣವನ್ನು ಡಿ.ಡಿ ರೂಪದಲ್ಲಿ ಎಸ್‌ಐಟಿ ತಂಡಕ್ಕೆ ಹಿಂದಿರುಗಿಸಿದ್ದು, ಆ ಹಣವನ್ನು ಎಸ್‌ಐಟಿ ವಶಪಡಿಸಿಕೊಂಡಿದೆ.
ಈ ಕಾರ್ಯಾಚರಣೆಯನ್ನು ವಿಶೇಷ ತನಿಖಾ ತಂಡದ ಮುಖ್ಯಸ್ಥ ಡಾ. ಬಿ.ಆರ್. ರವಿ ಕಾಂತೇಗೌಡ, ಸಿಸಿಬಿ ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ, ಅಕ್ರಮ ಹಣವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ರೌಡಿಶೀಟರ್ ಸೇರಿ ಇಬ್ಬರ ಬಂಧನ:
ಐಎಂಎ ಜುವೆಲರ್ಸ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಓರ್ವ ರೌಡಿಶೀಟರ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವ ಮುನೀರ್ ಅಲಿಯಾಸ್ ಗನ್ ಮುನೀರ್ ಹಾಗೂ ಬ್ರಿಗೇಡ್ ಬಾಬು ಬಂಧಿತ ಆರೋಪಿಗಳು.
ವಂಚನೆ ಪ್ರಕರಣದ ಎಸ್‌ಐಟಿ ತಂಡಕ್ಕೆ ರಿಚ್‌ಮಂಡ್ ರಸ್ತೆಯಲ್ಲಿರುವ ಐಎಂಎ ಸಂಸ್ಥೆಯ ಒಡೆತನದ ಅಪಾರ್ಟ್‌ಮೆಂಟ್‌ನ ದಾಖಲೆಗಳನ್ನು ಆರೋಪಿಗಳು ನಕಲಿಯಾಗಿ ಸೃಷ್ಟಿಸಿ ಅತಿಕ್ರಮ ಪ್ರವೇಶ ಮಾಡಿರುತ್ತಾರೆಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.