ಬೆಂಗಳೂರು:ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಶಾಸಕ ಜಮೀರ್ ಅಹಮದ್ ಅವರನ್ನು ಸತತ ಎಂಟು ಗಂಟೆಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.
ಐಎಂಎ ವಂಚನೆ ಪ್ರಕರಣ: ಸತತ 8 ಗಂಟೆಗಳಿಂದ ಜಮೀರ್ಗೆ ಎಸ್ಐಟಿ ಡ್ರಿಲ್
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಶಾಸಕ ಜಮೀರ್ ಅಹಮದ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗ್ಗೆ 11 ಗಂಟೆಯಿಂದ ಸತತವಾಗಿ ವಿಚಾರಣೆ ನಡೆಸುತ್ತಿದ್ದು, ರಾತ್ರಿ 10ರವರೆಗೆ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಜಮೀರ್ ಬಂಧನ ಸಾಧ್ಯತೆ ಬಗ್ಗೆ ದೂರವಾಣಿ ಮೂಲಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿರುವ ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ, ವಿಚಾರಣೆ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅವರನ್ನು ಎಸ್ಐಟಿ ಕಚೇರಿಗೆ ಕರೆಸಿಕೊಂಡಿದ್ದೇವೆ. ವಿಚಾರಣೆ ಇನ್ನೂ ನಡೆಯುತ್ತಿದ್ದು, ಇನ್ನೂ ತಡವಾಗುವ ಸಾಧ್ಯತೆಯಿದೆ. ಜಮೀರ್ ಅವರನ್ನು ಬಂಧಿಸುವ ತೀರ್ಮಾನಕ್ಕೆ ಬಂದಿಲ್ಲ ಎಂದಿದ್ದಾರೆ.
ವಿಚಾರಣೆ ವೇಳೆ ಜಮೀರ್ ಕೆಲ ಕಾಲ ವಕೀಲರನ್ನು ಕರೆಸಿಕೊಂಡು ತದ ನಂತರ ಹೊರಗೆ ಕಳುಹಿಸಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ ಮನ್ಸೂರ್ ಖಾನ್, ಜಮೀರ್ ಮಾತನಾಡಿರುವ ವಿಡಿಯೋ ತೋರಿಸಿದ್ದಕ್ಕೆ ಉತ್ತರಿಸಿದ ಜಮೀರ್, ಮನ್ಸೂರ್ ಜೊತೆ ಎರಡು ಮೂರು ವರ್ಷಗಳಿಂದ ಒಡನಾಟ ಹೊಂದಿದ್ದೇನೆ ಅಷ್ಟೇ. ನಾನು ಯಾವುದೇ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ. ನನಗೆ ಕೋಟ್ಯಂತರ ರೂಪಾಯಿ ಆಸ್ತಿಯಿದೆ. ನ್ಯಾಷನಲ್ ಟ್ರಾವೆಲ್ಸ್ನಿಂದ ಸಾಕಷ್ಟು ಆದಾಯ ಬರುತ್ತಿದೆ. ಮನ್ಸೂರ್ಗೆ ಸೈಟ್ ಮಾರಿದ್ದು ಬಿಟ್ಟರೆ ಯಾವುದೇ ಅಕ್ರಮ ಹಣ ನಾನು ಮನ್ಸೂರ್ನಿಂದ ಪಡೆದಿಲ್ಲ ಎಂದು ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.