ಬೆಂಗಳೂರು:ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಇಂದು ಐಎಂಎ ಸಂಸ್ಥೆ ಒಡೆತನದ ಫ್ರಂಟ್ ಲೈನ್ ಫಾರ್ಮಾದ ಮೂರು ಮಳಿಗೆಗಳ ಮೇಲೆ ದಾಳಿ ನಡೆಸಿದೆ.
ಐಎಂಎ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆಯುತ್ತಿದೆ. ಐಎಂಎ ಒಡೆತನದ ಪ್ರಮುಖ ಮಳಿಗೆಗಳ ಮೇಲೆ ಕಣ್ಣಿಟ್ಟಿರುವ ಎಸ್ಐಟಿ, ಇಂದು ಫಾರ್ಮಸಿ ಮೇಲೆ ದಾಳಿ ನಡೆಸಿ ನಗದು ಮತ್ತು ಬೆಲೆ ಬಾಳುವ ಉಪಕರಣಗಳನ್ನು ವಶಪಡಿಸಿಕೊಂಡಿದೆ.
ಐಎಂಎ ಸಂಸ್ಥೆಯ ಫಾರ್ಮಸಿ ಮಳಿಗೆಗಳು ಮಲ್ಲೇಶ್ವರಂ, ಯಶವಂತಪುರ ಮತ್ತು ವಿಜಯನಗರದಲ್ಲಿದ್ದು, 3 ಮಳಿಗೆಗಳ ಮೇಲೆ ಡಿವೈಎಸ್ಪಿ ಅನಿಲ್ ಭೂಮಿ ರೆಡ್ಡಿ ಅವರ ನೇತೃತ್ವದಲ್ಲಿ ದಾಳಿ ಮಾಡಿ, ಸುಮಾರು 53 ಲಕ್ಷ ಮೌಲ್ಯದ ಉಪಕರಣ ಹಾಗೂ 2.22 ಲಕ್ಷ ನಗದು ವಶಪಡಿಸಿಕೊಂಡು ಇನ್ನೂ ದಾಳಿ ಮುಂದುವರೆಸಿದೆ.
ಹಾಗೇ ನಿನ್ನೆ ಐಎಂಎ ಕಂಪನಿಯ ವಂಚನೆ ಪ್ರಕರಣದಲ್ಲಿ ಬಂಧನವಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಕುಮಾರ್ ಎಂಬುವರನ್ನು ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಇಂದು ಎಸ್ಐಟಿ ಹಾಜರು ಪಡಿಸಿತ್ತು. ಈ ವೇಳೆ ಎಸ್ಐಟಿ ಹೆಚ್ಚಿನ ವಿಚಾರಣೆಗೆ ನ್ಯಾಯಲಯಕ್ಕೆ ಮನವಿ ಮಾಡಿದ ಹಿನ್ನೆಲೆ ಕುಮಾರ್ನನ್ನು ನ್ಯಾಯಲಯ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.