ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಸಿಬಿಐ ವಿಶೇಷ ಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ರೋಷನ್ ಬೇಗ್ ಸಲ್ಲಿಸಿರುವ ಅರ್ಜಿಯನ್ನು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡಸಿತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ಅವರು ವಾದ ಮಂಡಿಸಿ, ರೋಷನ್ ಬೇಗ್ ಅವರನ್ನು ಆರೋಪಿಗಳ ಹೇಳಿಕೆ ಆಧಾರದಲ್ಲಿ ಬಂಧಿಸಲಾಗಿದೆ. 2018ರ ಆರೋಪಗಳಿಗೆ ಸಂಬಂಧಿಸಿದಂತೆ ಈಗ ಬಂಧಿಸಲಾಗಿದೆ. ಹಾಗಿದ್ದೂ, ರೋಷನ್ ಬೇಗ್ ಅವರು ತನಿಖಾಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.
ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿಯೂ ತನಿಖೆಗೆ ಸಹಕಾರ ನೀಡಲಿದ್ದಾರೆ. ಪ್ರಸ್ತುತ ಬೇಗ್ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆಯ ಅಗತ್ಯವಿದೆ. ಹೀಗಾಗಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ಸರ್ಕಾರಿ ಅಭಿಯೋಜಕರು ವಾದಿಸಿ, ರೋಷನ್ ಬೇಗ್ ಅವರ ಬ್ಯಾಂಕ್ ಖಾತೆಗಳಿಗೆ ಐಎಂಎ ಠೇವಣಿದಾರರ ಹಣವನ್ನು ಅಕ್ರಮವಾಗಿ ನೀಡಲಾಗಿದೆ.
ಈ ಕುರಿತು ಮನ್ಸೂರ್ ಅಲಿಖಾನ್ ಕೂಡ ಹೇಳಿಕೆ ನೀಡಿದ್ದಾರೆ. ಜಾಮೀನು ನೀಡಿದರೆ, ಆರೋಪಿ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.ವಾದ-ಪ್ರತಿವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿತು.
ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ ನವೆಂಬರ್ 22 ರಂದು ಬಂಧಿಸಲಾಗಿತ್ತು. ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ರೋಷನ್ ಬೇಗ್ ಈವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.