ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಕ್ಕೊಳಗಾಗಿರುವ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಆದರೆ ಸರ್ಕಾರ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿಯವರನ್ನು ಅಮಾನತುಗೊಳಿಸದೆ, ನಾನ್ ಐಪಿಎಸ್ ಅಧಿಕಾರಿಗಳಿಗೆ ಸುಣ್ಣ, ಐಪಿಎಸ್ ಅಧಿಕಾರಿಗಳಿಗೆ ಬೆಣ್ಣೆ ಎಂಬಂತೆ ದ್ವಿಮುಖ ಧೋರಣೆ ಪ್ರದರ್ಶಿಸಿದೆ.
ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಈ ಮೂವರು ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಅದೇಶ ನೀಡಲಾಗಿದೆ. ಸಿಐಡಿಯಲ್ಲಿದ್ದ ಡಿಎಸ್ಪಿ ಇ.ಬಿ. ಶ್ರೀಧರ್ ಮತ್ತು ಕಮರ್ಶಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ ಎಂ. ರಮೇಶ್ ಹಾಗೂ ಅಂದಿನ ಸಬ್ ಇನ್ಸ್ ಪೆಕ್ಟರ್ ಗೌರಿಶಂಕರ್ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮೊನ್ನೆಯಷ್ಟೇ ಸಿಬಿಐ ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಚಾರ್ಜ್ ಶೀಟ್ನಲ್ಲಿ ಸಿಬಿಐ 28 ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಪೊಲೀಸ್ ಅಧಿಕಾರಿಗಳು ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಜೊತೆ ಕೈ ಜೋಡಿಸಿದ್ದರು. ಜೊತೆಗೆ ಅಕ್ರಮ ಗಮನಕ್ಕೆ ಬಂದಿದ್ದರೂ ಅದನ್ನು ಮರೆಮಾಚಿ ಆರೋಪಿಗೆ ಸಹಾಯ ಮಾಡಿದ್ದರು. ಕಮರ್ಷಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರಿಗೆ ಮನ್ಸೂರ್ ಖಾನ್ ಮಾಡಿರುವ ಬಹುಕೋಟಿ ವಂಚನೆ ಪ್ರಕರಣ ಗೊತ್ತಿದ್ರೂ, ಪೊಲೀಸರು ಸರಿಯಾಗಿ ತನಿಖೆ ಮಾಡಿರಲಿಲ್ಲ. ಕೆಪಿಐಡಿ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳದೇ, ಕಾನೂನಿನಡಿ ಸೂಕ್ತ ತನಿಖೆ ನಡೆಸದೆ ಬದಲಿಗೆ ಅವರ ಮೇಲಿರುವ ಆರೋಪವನ್ನು ತಳ್ಳಿ ಹಾಕಿ ದೂರುಗಳನ್ನು ಮುಚ್ಚಿಹಾಕುವಂತೆ ಶಿಫಾರಸ್ಸು ಮಾಡಿರುವ ಆರೋಪ ಇವರ ಮೇಲಿದೆ.