ಬೆಂಗಳೂರು: ಐಎಂಎ ಹೂಡಿಕೆ ಪ್ರಕರಣದಲ್ಲಿ ಶಾಮಿಲಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ರಕ್ಷಣೆ ಕುರಿತು ರಾಜ್ಯಪಾಲರು ತನಿಖಾಧಿಕಾರಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಐಎಂಎ ಪ್ರಕರಣ: ರೋಷನ್ ಬೇಗ್ ಬಗ್ಗೆ ರಾಜ್ಯಪಾಲರು ಬರೆದ ಪತ್ರ ಹಾಜರುಪಡಿಸಲು ಹೈಕೋರ್ಟ್ ಸೂಚನೆ
ಐಎಂಎ ಹೂಡಿಕೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರ ರಕ್ಷಣೆ ಕುರಿತು ರಾಜ್ಯಪಾಲರು ಬರೆದಿದ್ದಾರೆ ಎನ್ನಲಾದ ಪತ್ರವನ್ನ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿಯ ವಿಚಾರಣೆಯು ಮುಖ್ಯನ್ಯಾಯಮೂರ್ತಿಗಳಿದ್ದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸೋಮವಾರ ನಡೆಯಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಆರೋಪಿ ರೋಷನ್ ಬೇಗ್ ಅವರ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಕೋರಿ ರಾಜ್ಯಪಾಲರುತನಿಖಾಧಿಕಾರಿಗೆ ಬರೆದಿರುವ ಪತ್ರದ ಕುರಿತು ವಿಚಾರ ಪ್ರಸ್ತಾಪಿಸಿದರು. ಹಾಗೆಯೇ ರೋಷನ್ ಬೇಗ್ ಅವರಿಗೆ 4 ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಮತ್ತೊಂದೆಡೆ ರಾಜ್ಯಪಾಲರು ತನಿಖಾಧಿಕಾರಿಗೆ ಪತ್ರ ಬರೆದಿರುವುದು ಬಹಳ ಅನುಮಾನ ಹುಟ್ಟಿಸಿದೆ ಎಂದು ನ್ಯಾಯಲಯದಲ್ಲಿ ಹೇಳಿದರು.
ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಅವರು ಸಿಬಿಐ ನಡೆಸಿದ ತನಿಖಾ ಪ್ರಗತಿ ವರದಿಯನ್ನ ನ್ಯಾಯಾಲಯದಲ್ಲಿ ಸಲ್ಲಿಸಿದರು. ಸರ್ಕಾರಿ ಅಧಿಕಾರಿಗಳ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಲು ಪೂರ್ವಾನುಮತಿ ಬೇಕು. ಹೀಗಾಗಿ ಇದಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ಇದನ್ನ ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯವು ಐಎಂಐ ಪ್ರಕರಣದ ವಿಚಾರಣೆಗೆ ಸಕ್ಷಮ ಪ್ರಾಧಿಕಾರಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಸಕ್ಷಮ ಪ್ರಾಧಿಕಾರ ಆದಷ್ಟು ಬೇಗ ಎಸ್ಐಟಿ ಪತ್ತೆ ಮಾಡಿದ್ದ ಸ್ಥಿರ ಹಾಗೂ ಚರ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಅಂತಿಮ ಆದೇಶ ಹೊರಡಿಸಬೇಕು ಎಂದು ಹೇಳಿ ವಿಚಾರಣೆಯನ್ನ ಅಕ್ಟೋಬರ್ 16ಕ್ಕೆ ಮುಂದೂಡಿಕೆ ಮಾಡಿದೆ.