ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಬಂದ ಮೊದಲಲ್ಲಿ ಫೇಸ್ ಮಾಸ್ಕ್ ಕೊರತೆ ಉಂಟಾಯಿತು. ದಿಢೀರ್ ಸೋಂಕಿತರ ಸಂಖ್ಯೆ ಏರಿಕೆಯಾದಾಗ ಆಸ್ಪತ್ರೆಯಲ್ಲಿ ಹಾಸಿಗೆ, ಆ್ಯಂಬ್ಯುಲೆನ್ಸ್ ಕೊರತೆ ಕಂಡುಬಂತು. ಇದೀಗ ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಾಗಿದೆ.
ಹೀಗಾಗಿ ಭಾರತೀಯ ವೈದ್ಯಕೀಯ ಸಂಘವು ಆಕ್ಸಿಜನ್ ವ್ಯತ್ಯಯ ಆಗದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಲಿ ಎಂದು ಮನವಿ ಮಾಡಿದೆ. ಖಾಸಗಿ ಆಸ್ಪತ್ರೆಗಳಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮವಹಿಸಬೇಕಿದೆ. ಒಂದು ತಿಂಗಳಿಗೆ ಬಳಕೆಯಾಗುತ್ತಿದ್ದ ಆಕ್ಸಿಜನ್ ಈಗ 2-3 ದಿನಕ್ಕೆ ಬಳಕೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಇತ್ತ ತಮಿಳುನಾಡಿನಿಂದ ರಾಜ್ಯಕ್ಕೆ ಆಕ್ಸಿಜನ್ ಸಿಲಿಂಡರ್ ಸರಬರಾಜು ಆಗುತ್ತಿತ್ತು. ಆದರೆ ಅದನ್ನು ತಡೆ ಹಿಡಿಯಲಾಗಿದೆ. ಜಿಂದಾಲ್ನಲ್ಲಿ ರಾಜ್ಯದ ಶೇ.70ರಷ್ಟು ಆಕ್ಸಿಜನ್ ಪೂರೈಕೆ ಮಾಡುವ ಸಾಮರ್ಥ್ಯ ಇದೆ. ಸರ್ಕಾರ ಅವರ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲಿ ಎಂದು ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಶ್ರೀನಿವಾಸ್ ಮನವಿ ಗುಜರಾತ್ನಲ್ಲಿ ಅತೀ ಹೆಚ್ಚು ಆಕ್ಸಿಜನ್ ಸಿಲಿಂಡರ್ ಉತ್ಪಾದನೆ ಮಾಡಲಾಗುತ್ತದೆ. ಅಲ್ಲಿಂದ ರಾಜ್ಯಕ್ಕೆ ತರುವ ವ್ಯವಸ್ಥೆ ಮಾಡಲಿ ಎಂದಿರುವ ಡಾ.ಶ್ರೀನಿವಾಸ್, ಸರ್ಕಾರ ಈಗಲೇ ಎಚ್ಚೆತುಕೊಳ್ಳದೇ ಇದ್ದರೆ ಆಕ್ಸಿಜನ್ ಕೊರತೆಯಿಂದ ಬ್ರೈನ್ ಡೆತ್, ಐಪಾಕ್ಸಿ ಆಗಿ ಮೃತರಾಗುವ ಸಂಭವ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜನರು ಆತಂಕಕ್ಕೆ ಒಳಗಾಗಿ ಆಕ್ಸಿಜನ್ ಸಿಲಿಂಡರ್ಅನ್ನು ಮನೆಯಲ್ಲಿ ಶೇಖರಿಸುತ್ತಿದ್ದಾರೆ. ಹೀಗಾಗಿ ಇನ್ನಷ್ಟು ಕೊರತೆ ಎದುರಾಗಲಿದ್ದು, ಈಗಲೇ ಸರ್ಕಾರ ವ್ಯವಸ್ಥೆ ಮಾಡಬೇಕು ಅಂತ ಮನವಿ ಮಾಡಿದ್ದಾರೆ.