ಬೆಂಗಳೂರು: ಮಾಜಿ ಪ್ರೇಯಸಿಯ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ "ಯಾರು ಮಾದಕ ಪದಾರ್ಥ ಸೇವಿಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಯಲಿ. ನಾನು ಈ ಸವಾಲು ಸ್ವೀಕರಿಸಲು ಸಿದ್ಧನಿದ್ದೇನೆ" ಎಂದಿದ್ದಾರೆ.
ತಮ್ಮ ವಿರುದ್ಧದ ಗಂಭೀರ ಆರೋಪಗಳ ಕುರಿತು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿರುವ ಅವರು, "ಅವರು ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಮಾದಕ ಪದಾರ್ಥ ಸೇವಿಸುತ್ತಿದ್ದೆ ಎಂದು ಹೇಳಿದ್ದಾರೆ. ಇವೆಲ್ಲವೂ ಸಹ ನನ್ನ ಕ್ರಿಕೆಟ್ ಜೀವನವನ್ನು ಅಂತ್ಯಗೊಳಿಸುವ ಯತ್ನ" ಎಂದು ಹೇಳಿದರು.
"ಅಹಮದಾಬಾದಿಗೆ ಬಂದಿದ್ದಾಗ ಅವರು ನನ್ನ ರೂಮಿಗೆ ಮಾದಕ ವಸ್ತುಗಳನ್ನು ತರಿಸಿಕೊಂಡು ಸೇವಿಸಿದ್ದಾರೆ. ಆ ಸಂದರ್ಭದಲ್ಲಿ ನಾನು ಎಷ್ಟೇ ಹೇಳಿದರೂ ಸಹ ಕೇಳದೆ, ನನ್ನ ಕ್ರಿಕೆಟ್ ಜೀವನ ಅಂತ್ಯ ಮಾಡುವುದಾಗಿಯೂ, ನನ್ನ ಹೆಸರು ಹಾಳು ಮಾಡುವುದಾಗಿಯೂ ಮಾದಕ ಸೇವನೆ ಮುಂದುವರೆಸಿದ್ದರು. ಓರ್ವ ಕ್ರೀಡಾಪಟುವಾಗಿ ನಾನು ಮಾದಕ ವಸ್ತುಗಳ ಸೇವನೆಯ ವಿರೋಧಿ. ಆದ್ದರಿಂದ ಆ ಸಂದರ್ಭದಲ್ಲಿ ನನ್ನ ರಕ್ಷಣೆಗಾಗಿ ಈ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಅದನ್ನು ಪೊಲೀಸರಿಗೂ ನೀಡುತ್ತಿದ್ದೇನೆ. ಅದಷ್ಟೇ ಅಲ್ಲದೇ, ಬೇರೆಯವರ ಜೊತೆ ಹೋಟೆಲ್‌ಗಳಲ್ಲಿ ಮಾದಕ ಸೇವನೆ ಮಾಡುತ್ತಿರುವ ವಿಡಿಯೋಗಳೂ ಸಹ ನನಗೆ ದೊರೆತಿದ್ದು, ಅವುಗಳನ್ನೂ ಪೊಲೀಸರಿಗೆ ನೀಡುತ್ತೇನೆ. ಈ ವಿಚಾರದಲ್ಲಿ ಸುಳ್ಳು ಆರೋಪಗಳ ಮೂಲಕ ನನಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ನನಗೆ ನ್ಯಾಯ ಬೇಕಿದೆ, ಆದ್ದರಿಂದ ಅಗತ್ಯ ದಾಖಲೆಗಳನ್ನು ನೀಡುತ್ತಿದ್ದೇನೆ" ಎಂದಿದ್ದಾರೆ.
ಇದನ್ನೂ ಓದಿ:ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ; ಪ್ರತಿ ದೂರು ನೀಡಿದ ಮಾಜಿ ಪ್ರೇಯಸಿ