ಬೆಂಗಳೂರು: ರಮೇಶ್ ಜಾರಕಿಹೊಳಿ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎಂಬ ವಿಚಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಪಡೆಯಲು ಇದೇನು ಅಂಚೆ ಇಲಾಖೆಯಲ್ಲ. ನಾನು ಈ ವಿಧಾನಸಭೆಯ ಸ್ಪೀಕರ್. ಅವರು ಅಂಥ ಹೇಳಿಕೆ ನೀಡುವ ಮೊದಲು ಅವರ ಭಾಷೆ ಮೇಲೆ ನಿಗಾ ಇಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಅವರು ಜಾಗ್ರತೆ ವಹಿಸಬೇಕು. ಫ್ಯಾಕ್ಸ್ನಲ್ಲಿ ಏನು ಕಳಿಸುವುದು?. ನನ್ನನ್ನು ಅವರೇನು ಅವರ ಕೆಲಸಗಾರ ಎಂದು ತಿಳಿದುಕೊಂಡಿದ್ದಾರಾ?. ಯಾರ ದೊಡ್ಡಸ್ತಿಕೆ ಇಲ್ಲಿ ನಡೆಯಲ್ಲ. ಸಂವಿಧಾನ ಮಾತ್ರ ದೊಡ್ಡದು. ಯಾರ ಗತ್ತು ಗೈರತ್ತುಗಳಿಗೆ ತಲೆಬಾಗಲು ನಾನು ಇಲ್ಲಿಗೆ ಬಂದಿಲ್ಲ. ನಾನು ತಲೆ ಬಾಗೋದು ಸಂವಿಧಾನದ ಆಶಯಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ನನಗೆ ಬಂದಿದ್ದು ಒಂದೇ ಒಂದು ರಾಜೀನಾಮೆ ಪತ್ರ:
ನನಗೆ ಬಂದಿದ್ದು ಒಂದೇ ಒಂದು ರಾಜೀನಾಮೆ ಪತ್ರ. ಆನಂದ್ ಸಿಂಗ್ ಆರೂವರೆ ಗಂಟೆಗೆ ದೊಮ್ಮಲೂರಿನ ನನ್ನ ಬಾಡಿಗೆ ನಿವಾಸಕ್ಕೆ ಬಂದಿದ್ದರು. ಭಾನುವಾರ ಬೆಳಗ್ಗೆ ನಿಟ್ಟೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳುವಾಗ ರಾತ್ರಿ 11 ಗಂಟೆ ಆಗಿತ್ತು. ಮರು ದಿನ ಬೆಳಗ್ಗೆ ಆನಂದ್ ಸಿಂಗ್ ಬಂದಿದ್ದಾರೆ ಎಂದು ಮನೆಯ ಬಾಣಸಿಗ ತಿಳಿಸಿದ. ಬಳಿಕ ಅವರನ್ನು ಭೇಟಿಯಾಗಿ, ರಾಜೀನಾಮೆ ಪತ್ರ ಸ್ವೀಕಾರ ಮಾಡಿದೆ.
ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇನೆ ಎಂದು ಅವರನ್ನು ಕಳುಹಿಸಿದೆ. ಬೇರೆ ಯಾವ ಶಾಸಕರು ನನಗೆ ಪತ್ರವನ್ನು ಕೊಟ್ಟಿಲ್ಲ, ಸಂಪರ್ಕನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಆನಂದ್ ಸಿಂಗ್ ರಾಜೀನಾಮೆ ಸಂಬಂಧ ನಿರ್ಧಾರ ಕೈಗೊಳ್ಳುವ ಮುನ್ನ ಸಾರ್ವಜನಿಕ ಅಭಿಪ್ರಾಯವನ್ನು ಖಂಡಿತವಾಗಿ ನಾನು ಸ್ವೀಕಾರ ಮಾಡುತ್ತೇನೆ. ಆನಂದ್ ಸಿಂಗ್ ಕರೆಸಿ ಬೇಕಾದರೆ ವಿಚಾರಣೆ ಮಾಡುತ್ತೇನೆ. ಇಷ್ಟೇ ದಿನದಲ್ಲಿ ರಾಜೀನಾಮೆ ಸ್ವೀಕಾರ ಮಾಡಬೇಕು ಅಥವಾ ತಿರಸ್ಕರಿಸಬೇಕು ಎಂಬ ಬಗ್ಗೆ ಕಾನೂನಿನಲ್ಲಿ ಎಲ್ಲೂ ಉಲ್ಲೇಖ ಇಲ್ಲ.
ಸ್ಪೀಕರ್ ರಮೇಶ್ ಕುಮಾರ್ ಗರಂ ಸಾರ್ವಜನಿಕರ ಭಾವನೆಯನ್ನು ಗೌರವಿಸುವ ರೀತಿಯಲ್ಲಿ ಪ್ರಜಾಸತ್ತಾತ್ಮಕ ಭಾವನೆಯನ್ನು ರಕ್ಷಿಸುವ ಹಿತದೃಷ್ಟಿಯಿಂದ ಜವಾಬ್ದಾರಿಯುತವಾಗಿ, ಪಕ್ಷಪಾತ ಇಲ್ಲದೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಅವರು ರಾಜೀನಾಮೆ ಕೊಡಲು ಕಾರಣ ಏನು?. ಯಾವುದಾದರು ಉದ್ವಿಗ್ನತೆಗೆ ಒಳಗಾದರಾ, ಖಿನ್ನತೆಗೆ ಒಳಗಾದರಾ, ಯಾವುದಾದರು ಕೆಟ್ಟ ಘಟನೆ ನಡೆದಿದೆಯಾ ಎಂಬ ಬಗ್ಗೆ ವಿಚಾರಿಸಿ, ಅವರ ಉತ್ತರ ಮನವರಿಕೆಯಾದ ಬಳಿಕ ನಿರ್ಧಾರ ಕೈಗೊಳ್ಳುತ್ತೇನೆ ಎಂದು ವಿವರಿಸಿದರು. ರಾಜೀನಾಮೆ ಪತ್ರದ ತಾಂತ್ರಿಕತೆ ಬಗ್ಗೆ ತಲೆಕಡೆಸಿಕೊಳ್ಳಲ್ಲ. ಜನಪ್ರತಿನಿಧಿ ಕಾಯ್ದೆಯ ಪ್ರಕಾರ ತೀರ್ಮಾನ ಕೈಗೊಳ್ಳುತ್ತೇನೆ. ಜನಾಭಿಪ್ರಾಯವನ್ನು ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.