ಬೆಂಗಳೂರು:''ನಾನು ಕನ್ನಡಕ ಹಾಕ್ಕೊಂಡು ಕತ್ತಲಲ್ಲಿದ್ದೀನಿ, ಯಾವ ವಿಚಾರವೂ ನನಗೆ ಗೊತ್ತಿಲ್ಲ'' ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಮುಂದೆಯೂ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬೆಂಗಳೂರಲ್ಲಿ ಇಂದು (ಶುಕ್ರವಾರ) ಮಾತನಾಡಿದ ಅವರು, ''ನಾನು ಕಣ್ಣು ಆಪರೇಷನ್ ಮಾಡಿಸಿಕೊಂಡು ನಾಲ್ಕು ದಿನ ಆಗಿದೆ. ನನಗೆ ಟಿವಿ ನೋಡೋಕು ಬಿಡ್ತಿಲ್ಲ. ಏನು ಚರ್ಚೆ ಆಗಿದ್ಯೋ, ಆ ಗೋಜಿಗೆ ನಾನು ಹೋಗಿಲ್ಲ. ಈಗಾಗಲೇ ವರಿಷ್ಠರು ಬಂದು ಸೂಚನೆ ನೀಡಿ ಹೋಗಿದ್ದಾರೆ. ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ, ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ಕೊಡಲ್ಲ'' ಎಂದರು.
ಸದುದ್ದೇಶದಿಂದ ಜಾತಿ ಗಣತಿ:''ನಮ್ಮಕಾಲದಲ್ಲೇ ಮಾನದಂಡ ಇಟ್ಟುಕೊಂಡು ಜಾತಿ ಗಣತಿ ವರದಿ ಕೇಳಿದ್ದೆವು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ಕೇಳಿದ್ವಿ. ನಮ್ಮ ಅವಧಿಯಲ್ಲಿ ಪರಿಪೂರ್ಣ ಏನಿದೆ ಅಂತ ಗೊತ್ತಿಲ್ಲ. ಜಯಪ್ರಕಾಶ್ ಹೆಗ್ಡೆ ವರದಿ ಕೊಡ್ತೀವಿ ಅನ್ನೋದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ವರದಿ ಕೊಟ್ಟಾಗ ಸರ್ಕಾರ ಸ್ವೀಕಾರ ಮಾಡಬೇಕು. ವರದಿ ಸ್ವೀಕಾರದ ಬಳಿಕ ಜಾರಿ ಮಾಡೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ'' ಎಂದು ಹೇಳಿದರು.