ಬೆಂಗಳೂರು: ಡಿಸಿಇಟಿ-ಪಿಜಿಸಿಇಟಿ ಪ್ರವೇಶಾತಿಯಲ್ಲಿ 2 ನೇ ಸುತ್ತಿನ ಕಟ್ಆಫ್ ಬಿಡುಗಡೆ ಮಾಡಿ ಮೂರನೇ ಸುತ್ತನ್ನು ನಡೆಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದೆದುರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಪ್ರತಿಭಟನೆಯ ವೇಳೆ ಕರ್ನಾಟಕ ದಕ್ಷಿಣದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೇಮ ಜೋಡಿದಾರ್ ಮಾತನಾಡಿ, "ಎಂಜಿನಿಯರಿಂಗ್, ಎಂಬಿಎ, ಎಂ.ಕಾಂನಂತಹ ಉನ್ನತ ಪದವಿಗಳಿಗೆ ಸೇರಬೇಕೆಂಬುದು ಲಕ್ಷಾಂತರ ವಿದ್ಯಾರ್ಥಿಗಳ ಕನಸು. ಇದಕ್ಕಾಗಿ ಹಗಲಿರುಳು ಶ್ರಮಪಟ್ಟು ಪ್ರವೇಶ ಪರೀಕ್ಷೆಗಳನ್ನು ಬರೆದು ಉತ್ತಮ ಶ್ರೇಯಾಂಕ ಪಡೆದು ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾಗುವ ಕನಸು ಕಂಡಿರುತ್ತಾರೆ. ಇಂತಹ ಕನಸು ಕಂಡ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಾರದರ್ಶಕ ಪ್ರಕ್ರಿಯೆ ಮೂಲಕ ಪ್ರೋತ್ಸಾಹವಾಗಿ ನಿಲ್ಲಬೇಕು. ಆದರೆ ಪ್ರಾಧಿಕಾರವು ಈ ಪರೀಕ್ಷೆಗಳನ್ನು ಕೈಗೊಂಡು, ಪ್ರವೇಶಾತಿಗಳನ್ನು ನೀಡುವ ನಿಟ್ಟಿನಲ್ಲಿ ಕೆಲವು ಲೋಪದೋಷಗಳನ್ನು ಮಾಡುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಡಿಸಿಇಟಿ- ಪಿಜಿಸಿಇಟಿ" ಎಂದು ಆರೋಪಿಸಿದರು.
"ತಾಂತ್ರಿಕ ಶಿಕ್ಷಣದಲ್ಲಿ ಮುಂದುವರೆಯಬೇಕೆಂಬ ಅಪೇಕ್ಷೆ ಇಟ್ಟುಕೊಂಡು ಡಿಪ್ಲೋಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನೇರ ಎರಡನೇ ವರ್ಷದ ಇಂಜಿಯರಿಂಗ್ ಪದವಿಗೆ ದಾಖಲಾಗುವ ಈ ಪ್ರವೇಶಾತಿ ಮತ್ತು ಎಂಬಿಎ ಅಂತ ಉನ್ನತ ಪದವಿಗಳಿಗೆ ಸೇರುವ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡುಬಂದಿವೆ. ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದ ಡಿಸಿಇಟಿ ಮತ್ತು ಪಿಜಿಸಿಇಟಿ ಎರಡನೇ ಸುತ್ತಿನ ಕಟ್ ಆಫ್ ಅಂಕಪಟ್ಟಿ ಮತ್ತು ಉಳಿದಿರುವ ಸೀಟ್ ಪ್ರಕಟಿಸದಿರುವುದು ಅನೇಕ ವಿದ್ಯಾರ್ಥಿಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಸಂದೇಹವನ್ನು ಉಂಟುಮಾಡುತ್ತಿದೆ" ಎಂದು ದೂರಿದರು.