ಸಿಲಿಕಾನ್ ಸಿಟಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರ. ಜನಸಂಖ್ಯೆ ಹೆಚ್ಚುತ್ತಿರುವಂತೆ ಇಲ್ಲಿನ ವಾಹನಗಳ ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಪ್ರಸ್ತುತ ನಗರದಲ್ಲಿ 86.6 ಲಕ್ಷ ವಾಹನಗಳಿದ್ದು, ಇವುಗಳಿಂದಾಗಿ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ.
ನಗರ ಭೂ ಸಾರಿಗೆ ನಿರ್ದೇಶನಾಲಯದ ಮಾಹಿತಿಯಂತೆ ಬೆಂಗಳೂರು ನಗರದಲ್ಲಿ ಪ್ರತೀ ಇಬ್ಬರಿಗೆ ಒಂದು ವಾಹನವಿದೆ. ವಾಹನಗಳು ಹೆಚ್ಚುತ್ತಿರುವುದರಿಂದಾಗಿ ಸರ್ಕಾರಿ ಜಾಗಗಳು ಪಾರ್ಕಿಂಗ್ ಸ್ಪಾಟ್ಗಳಾಗುತ್ತಿವೆ. ಕೆಲವು ಕಡೆ ಅಕ್ರಮ ಪಾರ್ಕಿಂಗ್ ತಾಣಗಳು ನಿರ್ಮಾಣಗಳಾಗಿ ಖಾಸಗಿಯವರು ವಸೂಲಿಗಿಳಿದ್ದಾರೆ. ಅಷ್ಟೇ ಅಲ್ಲದೇ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲೂ ವಾಹನಗಳನ್ನು ನಿಲ್ಸೋದು ಜನರಿಗೆ ಪರಿಪಾಠವಾಗಿಬಿಟ್ಟಿದೆ.
ಸಾರ್ವಜನಿಕ ಸಾರಿಗೆ ಬಳಸದೇ, ಪ್ರತಿ ವ್ಯಕ್ತಿಯೂ ಖಾಸಗಿ ಕಾರು, ಬೈಕ್ ಬಳಕೆಯಿಂದಾಗಿ ನಿಲುಗಡೆಗೆ ಜಾಗವಿಲ್ಲದಾಗಿದೆ. ಮನೆ ಮುಂದಿನ ರಸ್ತೆ ಅಷ್ಟೇ ಅಲ್ಲದೇ ನಗರದ ಪ್ರಮುಖ ಸಂಚಾರ ಮಾರ್ಗಗಳಲ್ಲೂ ಅಸ್ತವ್ಯಸ್ತವಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಫ್ರೀಡಂಪಾರ್ಕ್ ಸುತ್ತಮುತ್ತ, ಗಾಂಧಿನಗರದ ರಸ್ತೆಗಳು, ಕಾಟನ್ಪೇಟೆ, ಕಬ್ಬನ್ ಪೇಟೆಯ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ಇತರ ವಾಹನಗಳ ಓಡಾಟವೇ ಸಾಧ್ಯವಿಲ್ಲದಂತಾಗಿದೆ. ಮನೆ ಕಟ್ಟುವಾಗ ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್ಗೆ ಪ್ರತ್ಯೇಕ ಸ್ಥಳಾವಕಾಶ ಮಾಡುವ ನಿಯಮವೂ ನಗರದಲ್ಲಿ ಪಾಲನೆಯಾಗುತ್ತಿಲ್ಲ. ಸದ್ಯ ನಗರ ಭೂ ಸಾರಿಗೆ ನಿರ್ದೇಶನಾಲಯದ ನೂತನ ಪಾರ್ಕಿಂಗ್ ನೀತಿಗೆ ರಾಜ್ಯ ಸರ್ಕಾರಕ್ಕೆ ಅನುಮೋದನೆಗೆ ನೀಡಿದೆ
ನೂತನ ಪಾರ್ಕಿಂಗ್ ನೀತಿಯ ಪ್ರಮುಖಾಂಶಗಳು
- ಮನೆ ಮುಂದಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದಕ್ಕೆ ಶುಲ್ಕ ವಿಧಿಸುವುದು
- ಮನೆಯಲ್ಲಿ ಜಾಗ ಇಲ್ಲದವರು ವಾಹನ ಖರೀದಿಸುವುದನ್ನು ನಿರ್ಬಂಧಿಸುವುದು
- ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆ ಉತ್ತೇಜಿಸುವುದು
- ಪಾರ್ಕಿಂಗ್ ತಾಣಗಳ ಅಭಿವೃದ್ಧಿ - ನಿರ್ವಹಣೆಗೆ ಪಿಪಿಪಿ ಸಹಭಾಗಿತ್ವದ ಉತ್ತೇಜನ
- ಅಸ್ತವ್ಯಸ್ತ ಪಾರ್ಕಿಂಗ್ ಬದಲು ಅಚ್ಚುಕಟ್ಟಾಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ರೂಪಿಸುವುದು
ನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಅಥವಾ ಹಣ ಪಾವತಿಸುವ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದು ದ್ವಿಚಕ್ರ ವಾಹನಗಳ ಒಂದು ಗಂಟೆ ಅವಧಿಯ ನಿಲುಗಡೆಗೆ 30 ರೂ. ಕಾರುಗಳಿಗೆ 60 ರೂ. ಗರಿಷ್ಠ 8 ಗಂಟೆ ಅವಧಿಗೆ ದ್ವಿಚಕ್ರ ವಾಹನಕ್ಕೆ 750 ರೂ. ಕಾರುಗಳಿಗೆ 1500 ರೂಪಾಯಿವರೆಗೆ ಶುಲ್ಕ ಏರಿಕೆಗೆ ನಗರ ಭೂಸಾರಿಗೆ ನಿಯಮ ರೂಪಿಸಿದೆ. ಆದರೆ, ಪಾಲಿಕೆ ಚುನಾವಣೆ ಹೊಸ್ತಿಲಲ್ಲಿ ಈ ಹೊಸ ಪಾರ್ಕಿಂಗ್ ಜಾರಿಯೂ ಅನುಮಾನ ಎನ್ನಲಾಗುತ್ತಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ಖಾಸಗಿ ವಾಹನಗಳು ರಸ್ತೆಯಲ್ಲೇ ಪಾರ್ಕಿಂಗ್ ಮಾಡುವುದರಿಂದ ವಾಹನ ದಟ್ಟಣೆ, ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ನಗರಕ್ಕೆ ಪಾರ್ಕಿಂಗ್ ನೀತಿ ಅತಿ ಅಗತ್ಯಯಾಗಿದ್ದು, ಇನ್ನೂ ಜಾರಿಗೆ ಬಂದಿಲ್ಲ. ಬೇರೆ ದೇಶಗಳ ರೀತಿಯಲ್ಲಿ ಶುಲ್ಕ ಪಾವತಿಸಿ ನಿಲುಗಡೆ ಮಾಡುವ ವ್ಯವಸ್ಥೆ ಬರಬೇಕು. ದ್ವಿಚಕ್ರ ವಾಹನಕ್ಕೆ ಕಡಿಮೆ ಶುಲ್ಕ ಮಾಡಿ ಕಾರುಗಳಿಗೆ ಹೆಚ್ಚು ಶುಲ್ಕ ಮಾಡಬೇಕು. ಇದರಿಂದ ಸಾರ್ವಜನಿಕ ಸಾರಿಗೆ ಹೆಚ್ಚೆಚ್ಚು ಬಳಕೆಯಾಗಲಿದೆ ಎಂದಿದ್ದಾರೆ.