ಬೆಂಗಳೂರು: ಶಿವಮೊಗ್ಗದಲ್ಲಿನ ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಇದೀಗ ಚಿಕ್ಕಬಳ್ಳಾಪುರದಲ್ಲಿನ ಜಿಲೆಟಿನ್ ಸ್ಫೋಟ ಸರ್ಕಾರದ ನಿದ್ದೆಗೆಡಿಸಿದೆ. ಒಂದರ ಹಿಂದೊಂದರಂತೆ ನಡೆದ ಈ ಜಿಲೆಟಿನ್ ಸ್ಫೋಟದಿಂದ ಇದೀಗ ಅಕ್ರಮ ಕಲ್ಲು ಕ್ವಾರಿಗೆ ಅಂಕುಶ ಹಾಕಲು ಸರ್ಕಾರ ಮುಂದಾಗಿದೆ.
ಮೊದಲಿಗೆ ಶಿವಮೊಗ್ಗ, ಇದೀಗ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಕಲ್ಲು ಕ್ವಾರಿಗಾಗಿ ಬಳಸುವ ಜಿಲೆಟಿನ್ ಸ್ಫೋಟ ರಾಜ್ಯದಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆಯ ಕರಾಳತೆಯನ್ನು ಮತ್ತೆ ಬಿಚ್ಚಿಟ್ಟಿದೆ. ಅಕ್ರಮ ಕಲ್ಲು ಗಣಿಗಾರಿಕೆ ರಾಜ್ಯದಲ್ಲಿ ಯಾವ ರೀತಿ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಈ ಸತತ ಭೀಕರ ಸ್ಫೋಟ ಕೈಗನ್ನಡಿ ಹಿಡಿದಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 1083 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅದರಂತೆ 2017-18ರಲ್ಲಿ ರಾಜ್ಯದಲ್ಲಿ 404 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಸಂಬಂಧ 114 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. 6.13 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿತ್ತು. 2018-19ರಲ್ಲಿ 413 ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಸಂಬಂಧ 108 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಒಟ್ಟು 12.13 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು. ಇನ್ನು 2019-20ರಲ್ಲಿ 266 ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪತ್ತೆ ಹಚ್ಚಲಾಗಿತ್ತು. ಈ ಸಂಬಂಧ 117 ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. 9.08 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು.
ಅಕ್ರಮ ಕಲ್ಲು ಕ್ವಾರಿ ಕರಾಳತೆ ಹೇಗಿದೆ?:
ರಾಜ್ಯದಲ್ಲಿ ಸುಮಾರು 2000 ಅಕ್ರಮ ಕಲ್ಲು ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಅಕ್ರಮ ಕಲ್ಲು ಕ್ವಾರಿಗಳಿಗೆ ಅಂಕುಶ ಹಾಕುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ವಾಸ್ತವಾಂಶವನ್ನು 2019ರ ಸಿಎಜಿ ವರದಿ ಬೊಟ್ಟು ಮಾಡಿದೆ. ಗಣಿ ಮತ್ತು ಭೂ ವಿಜ್ಞಾನ ಹಾಗೂ ಐಐಎಸ್ಸಿ ಜಂಟಿ ಸಮೀಕ್ಷೆ ಪ್ರಕಾರ ಸ್ಯಾಟಲೈಟ್ ಚಿತ್ರಗಳ ಮೂಲಕ ಪತ್ತೆಯಾದಂತೆ ರಾಜ್ಯದಲ್ಲಿ 532 ಅಕ್ರಮ ಕ್ವಾರಿಗಳಿವೆ. ಇಲಾಖೆ ತಿಳಿಸಿರುವಂತೆ ರಾಜ್ಯದಲ್ಲಿ ಇಲ್ಲಿವರೆಗೆ 450 ಅಲಂಕರಿತ ಕಲ್ಲು ಕ್ವಾರಿಗಳು ಹಾಗೂ 300 ಸಾಮಾನ್ಯ ಕಲ್ಲು ಕ್ವಾರಿಗಳಿಗೆ ಅನುನತಿ ನೀಡಲಾಗಿದೆ. ಸುಮಾರು 2000 ಕ್ವಾರಿಗಳು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ಓದಿ:ಶಿವಮೊಗ್ಗದಲ್ಲಿ ಜಿಲೆಟಿನ್ ಜವರಾಯ: ಬೃಹತ್ ಸ್ಫೋಟಕ್ಕೆ ಬೆಚ್ಚಿಬಿದ್ದ ಮಲೆನಾಡು!
ಕಲ್ಲು ಗಣಿ ಗುತ್ತಿಗೆದಾರರು ತಮಗೆ ಮಂಜೂರಾದ ಗುತ್ತಿಗೆ ಪ್ರದೇಶದ ವ್ಯಾಪ್ತಿ ಮೀರಿ ಗಣಿಗಾರಿಕೆ, ಹೊರಗಡೆ ಅಥವಾ ಗುತ್ತಿಗೆ ಅವಧಿ ಮುಗಿದರೂ ಗಣಿಗಾರಿಕೆ ಮಾಡುತ್ತಿರುವುದು ಸಿಎಜಿ ವರದಿಯಲ್ಲಿ ಬೆಳಕಿಗೆ ಬಂದಿದೆ. ಸಿಎಜಿ ವರದಿಯಲ್ಲಿ ದಕ್ಷಿಣ ಕನ್ನಡ, ವಿಜಯಪುರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಇಂಥ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸುಮಾರು 9,571,693,000 ಟನ್ ಗ್ರಾನೈಟ್ ಕಲ್ಲು ಖನಿಜ ಇದ್ದು, ಸುಮಾರು 4,200 ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿ ಪ್ರದೇಶವನ್ನು ಹೊಂದಿದೆ.
ಅಧಿಕಾರಿಗಳು, ಕಲ್ಲು ಕ್ವಾರಿ ಮಾಲೀಕರು, ಸ್ಪೋಟಕ ಸಾಗಾಟಗಾರರ ನಡುವಿನ ನಂಟಿನಿಂದ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆ ಕಲ್ಲು ಕ್ವಾರಿ, ಗಣಿಗಾರಿಕೆ ಪ್ರದೇಶಗಳಿಗೆ ನಿರಂತರ ತಪಾಸಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ರಾಜಕಾರಣಿಗಳ ಪ್ರಭಾವ ಬಳಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಸಾಮಾನ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಅಕ್ರಮ ಕಲ್ಲು ಗಣಿಗಾರಿಕೆಗೆ ಅಂಕುಶ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ವಾರಿಗೆ ಬಳಸುವ ಜಿಲೆಟಿನ್ ಸ್ಟಿಕ್ ಸಾಗಾಟ, ಬಳಕೆ ಹೇಗೆ?:
ಕಲ್ಲು ಕ್ವಾರಿಯಲ್ಲಿ ಸ್ಫೋಟಕ್ಕಾಗಿ ಜಿಲೆಟಿನ್ ಸ್ಟಿಕ್ಗಳನ್ನು ಬಳಸಲಾಗುತ್ತದೆ. ಈ ಜಿಲೆಟಿನ್ ಬಳಕೆ ಮತ್ತು ಸಾಗಾಟಕ್ಕೆ ಪರವಾನಗಿ ಅಗತ್ಯವಾಗಿದೆ. ಖನಿಜ ಮತ್ತು ಗಣಿಗಾರಿಕೆ (ಸ್ಫೋಟಕ) ನಿಯಂತ್ರಣ 2012ರಡಿ ನಿರ್ವಹಣಾ ಪರವಾನಗಿ ಪಡೆಯಬೇಕು. ಪರವಾನಗಿ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಬೇಕಾಗುತ್ತದೆ.