ಬೆಂಗಳೂರು:ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದಡಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ), ಈ ವೇಳೆ ಸಿಕ್ಕ ಮಾಹಿತಿ ಹಾಗೂ ದಾಖಲೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ. ವಿದೇಶಿ ವರ್ಗಾವಣೆ, ಹೂಡಿಕೆ ಆರೋಪದಡಿ ಈ ಹಿಂದೆ ದಾಳಿ ನಡೆಸಿದ್ದ ಇಡಿ (ಜಾರಿ ನಿರ್ದೇಶನಾಲಯ) ನೀಡಿದ್ದ ಮಾಹಿತಿಯನ್ವಯ ಎಸಿಬಿ ಈ ದಾಳಿ ನಡೆದಿತ್ತು.
ಜಾರಿ ನಿರ್ದೇಶನಾಲಯದ ವರದಿಯಂತೆ ಶಾಸಕ ಜಮೀರ್ 87 ಕೋಟಿ 44 ಲಕ್ಷ 5 ಸಾವಿರ ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾರೆ. ಈ ವರದಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 5ರಂದು ಬೆಳ್ಳಂಬೆಳಗ್ಗೆ ಜಮೀರ್ ಒಡೆತನದ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದ 85 ಎಸಿಬಿ ಅಧಿಕಾರಿಗಳ 5 ತಂಡಗಳು ದಾಖಲೆಗಳನ್ನು ಜಾಲಾಡಿದ್ದರು. ಈ ಸಂದರ್ಭದಲ್ಲಿ ಜಮೀರ್ ಆಸ್ತಿ ಗಳಿಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಇದನ್ನೂ ಓದಿ:ಎಸಿಬಿ ದಾಳಿ ವೇಳೆ ಜಮೀರ್ ಅಹ್ಮದ್ ಮನೆಯಲ್ಲಿ ಬುಲೆಟ್ ಪತ್ತೆ ಬಗ್ಗೆ ಶಕೀಲ್ ಅಹ್ಮದ್ ಪ್ರತಿಕ್ರಿಯೆ
ಕಳೆದ ವರ್ಷ ಆಗಸ್ಟ್ 6 ಜಮೀರ್ ಅಹಮ್ಮದ್ಗೆ ಸೇರಿದ ನಾಲ್ಕು ಕಡೆ ಇಡಿ ಏಕಕಾಲದಲ್ಲಿ ದಾಳಿ ಮಾಡಿತ್ತು. ಈ ವೇಳೆ ಆದಾಯಕ್ಕಿಂತ ಶೇಕಡ 2030 ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದ್ದ ಬಗ್ಗೆ ಇಡಿ ಎಸಿಬಿಗೆ ರಿಪೋರ್ಟ್ ಕೊಟ್ಟು ತನಿಖೆ ಮಾಡಲು ಸೂಚಿಸಿತ್ತು. 2005 ರಿಂದ 2021ರವರೆಗೆ ಅವರ ಆದಾಯ, ತೆರಿಗೆ, ಆದಾಯದ ಮೂಲಗಳ ತನಿಖೆ ನಡೆಸಲು ಇಡಿ ಸೂಚನೆ ನೀಡಿದೆ ಎಂದು ಎಸಿಬಿ ಪ್ರಕಣೆ ಹೊರಡಿಸಿದೆ.
ಸುಮಾರು 16 ವರ್ಷಗಳ ಆದಾಯ ಹಾಗೂ ತೆರಿಗೆ ಪಾವತಿ ತನಿಖೆ ನಡೆಸಲು ಎಸಿಬಿ ಮುಂದಾಗಿದೆ. ಇಡಿ ರಿಪೋರ್ಟ್ ಇಟ್ಟುಕೊಂಡು ಎಸಿಬಿ ತನಿಖೆ ಆರಂಭಿಸಿದೆ. ಪ್ರತಿ ವರ್ಷ ತೆರಿಗೆ ಪಾವತಿ ಮಾಡಿದ್ದೇನೆ, ಎಲ್ಲ ದಾಖಲೆಗಳನ್ನ ಒದಗಿಸುತ್ತೇನೆ ಎಂದು ಎಸಿಬಿ ಅಧಿಕಾರಿಗಳಿಗೆ ಜಮೀರ್ ತಿಳಿಸಿದ್ದಾರೆ.
ಜಮೀರ್ ಮನೆ ಮೌಲ್ಯಮಾಪನ ಮಾಡಲು PWD ಇಲಾಖೆ ಇಂಜಿನಿಯರ್ಗಳನ್ನ ಬಳಸಿಕೊಳ್ಳಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. PWD ತಜ್ಞ ಇಂಜಿನಿಯರ್ ತಂಡದಿಂದ ಮನೆಯ ಸಂಪೂರ್ಣ ಮೌಲ್ಯಮಾಪನ ಮಾಡಿ, ರಿಪೋರ್ಟ್ ಪಡೆದು ಮುಂದಿನ ತನಿಖೆ ನಡೆಸಲು ಸಿದ್ಧತೆ ನಡೆಸಲಾಗಿದೆ.