ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಐದು ವರ್ಷಗಳಲ್ಲಿ (2013ರ ಏಪ್ರಿಲ್ನಿಂದ 2018ರ ಏಪ್ರಿಲ್ ಅಂತ್ಯದ ವರೆಗೆ) 33.92 ಕೋಟಿ ಇದ್ದ ಆದಾಯ ಈಗ 128.60 ಕೋಟಿ ರೂ. ಆಗಿದೆ. ಆದಾಯಕ್ಕೂ ಮೀರಿ ಶೇಕಡ 44ರಷ್ಟು ಆಸ್ತಿಯನ್ನು ಡಿಕೆಶಿ ಹೊಂದಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಬಗ್ಗೆ ಶಿವಕುಮಾರ್ ಅವರು ಸಮರ್ಪಕ ಉತ್ತರ ನೀಡಲು ವಿಫಲರಾಗಿದ್ದಾರೆ ಎಂದು ಸಿಬಿಐ ಎಫ್ಐಆರ್ನಲ್ಲಿ ಪ್ರಸ್ತಾಪಿಸಿದೆ.
ಅಕ್ರಮ ಆಸ್ತಿ ಗಳಿಕೆ ಬಗ್ಗೆ ಸೂಕ್ತ ಉತ್ತರ ನೀಡದಿರುವುದರಿಂದ ಭ್ರಷ್ಟಾಚಾರ ನಿಗ್ರಹ ಕಾಯಿದೆ ಕಲಂ 13 (2) , ಜೊತೆಗೆ 13(1) (ಇ) ನಡಿ ಡಿ.ಕೆ. ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ಮತ್ತು ಇಡಿ ತನಿಖೆ ಮತ್ತು ವಿಚಾರಣೆ ವೇಳೆ ಭ್ರಷ್ಟಾಚಾರ ಪ್ರಕರಣಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಡಿಕೆಶಿ ವಿರುದ್ಧದ ಪ್ರಕರಣ ಬಗ್ಗೆ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿ ನೀಡಿತ್ತು. ಹಾಗೂ ಡಿಕೆಶಿ ಅವರ ಆಪ್ತರಾದ ಆಂಜನೇಯ, ಹನುಮಂತಯ್ಯ, ಸಂಬಂಧಿಗಳಾದ ಶಶಿಕುಮಾರ್ ಶಿವಣ್ಣ, ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಶಿವಕುಮಾರ್ ಆದಾಯಕ್ಕೂ ಮೀರಿದ ಆಸ್ತಿ ಸಂಪಾದಿಸಿರುವುದು ಖಚಿತವಾಗಿತ್ತು ಎಂದು ಸಿಬಿಐ ಪ್ರಥಮ ಮಾಹಿತಿ ವರದಿಯಲ್ಲಿ ತಿಳಿಸಿದೆ.
ಡಿ.ಕೆ.ಶಿವಕುಮಾರ್ ಅವರು 1/4/2013ರಿಂದ 30/4/2018ರ ಅವಧಿಯಲ್ಲಿ ಕ್ಯಾಬಿನೆಟ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರ ಆದಾಯ 33.92 ಕೋಟಿ ರೂಪಾಯಿಗಳಿಂದ 128.60 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅವರ ಮತ್ತು ಅವರ ಕುಟುಂಬದ ಖರ್ಚು ಈ ಅವಧಿಯಲ್ಲಿ 113.12 ಕೋಟಿ ರೂಗಳೆಂದು ತಿಳಿಸಲಾಗಿದೆ. ಈ ಅವಧಿಯಲ್ಲಿ 74.93 ಕೋಟಿ ರೂಪಾಯಿಗಳಷ್ಟು ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವುದು ಕಂಡು ಬಂದಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ನಿನ್ನೆ ಡಿ.ಕೆ.ಶಿವಕುಮಾರ್ ಮನೆಯ ಮೇಲೆ ನಡೆದ ದಾಳಿ ವೇಳೆ ಸಿಬಿಐ ಅಧಿಕಾರಿಗಳು 57 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದರು. ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿನ ಅವರ ನಿವಾಸದ ಮೇಲೆ ಸೋಮವಾರ ಬೆಳಗ್ಗೆ ಸಿಬಿಐ ದಾಳಿ ನಡೆದಿತ್ತು.