ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಲು ಅದಾನಿ ಸಂಸ್ಥೆಯಿಂದ ಹಣ ಪಡೆದಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ 24 ಅಧಿಕಾರಿಗಳನ್ನು ರಾಜ್ಯ ಸರ್ಕಾರ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆ ತ್ಯಜಿಸುವ 18 ದಿನಗಳ ಮುನ್ನ ಸರ್ಕಾರ ಈ ಆದೇಶ ಹೊರಡಿಸಿದೆ. 2021ರ ಜುಲೈ 8ರಂದು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು 24 ತಪ್ಪಿತಸ್ಥ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಇಲಾಖೆಯ ಅಧೀನ ಕಾರ್ಯದರ್ಶಿ ಹೆಚ್.ಕೆ ಶಾಂತರಾಜು 2021ರ ಜುಲೈ 8ರಂದು ಆದೇಶ ಹೊರಡಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಹಾಗೂ ಅದಿರು ಸಾಗಣೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸರ್ಕಾರಕ್ಕೆ ತನಿಖಾ ವರದಿ ನೀಡಿದ್ದರು. ಈ ವರದಿಯಲ್ಲಿ ಅದಾನಿ ಎಂಟರ್ ಪ್ರೈಸೆಸ್ ನಿಂದ ಅಕ್ರಮವಾಗಿ ಹಣ ಪಡೆದು ಅಕ್ರಮವಾಗಿ ಅದಿರು ಸಾಗಿಸಲು ಅಧಿಕಾರಿಗಳು ನೆರವು ನೀಡಿರುವ ಕುರಿತು ಉಲ್ಲೇಖಿಸಲಾಗಿತ್ತು. ನಂತರ ಅದಾನಿ ಎಂಟರ್ ಪ್ರೈಸೆಸ್ನಿಂದ ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟರ್ ಆರ್ ಮೋಹನ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಅನ್ವಯ ತನಿಖೆ ನಡೆಸಲಾಗಿತ್ತು.
ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಶಿಸ್ತು ಪ್ರಾಧಿಕಾರಿಯಾಗಿ ನೇಮಿಸಲಾಗಿತ್ತು. ಇದೀಗ ಆರೋಪಿತ ಅಧಿಕಾರಿಗಳ ವಿರುದ್ಧ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ನ್ಯಾಯಾಲಯದಲ್ಲಿ ಯಾವುದೇ ಬಾಕಿ ಪ್ರಕರಣಗಳು ಉಳಿದಿಲ್ಲ ಎಂಬ ಅಂಶವನ್ನು ಪರಿಗಣಿಸಿ ಸರ್ಕಾರ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ.
ಬಳ್ಳಾರಿಯ ಅಕ್ರಮ ಗಣಿಗಾರಿಕೆ ಕುರಿತಂತೆ ಧಾರವಾಡದ ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ಸಮಾಜ ಪರಿವರ್ತನಾ ಸಮುದಾಯ ದೂರು ದಾಖಲಿಸಿತ್ತು. ಈ ಮೇರೆಗೆ ಸುಪ್ರೀಂಕೋರ್ಟ್ ಅಕ್ರಮ ಗಣಿಗಾರಿಕೆ ಕುರಿತು ತನಿಖೆಗೆ ಕೇಂದ್ರೀಯ ಉನ್ನತಾಧಿಕಾರ ಸಮಿತಿ(ಸಿಇಸಿ) ರಚಿಸಿತ್ತು. ಸಮಿತಿಯು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಶಿಫಾರಸ್ಸಿನಲ್ಲಿ ಅದಾನಿ ಸಂಸ್ಥೆ ವಿರುದ್ಧದ ತನಿಖೆಗೂ ತಿಳಿಸಲಾಗಿತ್ತು. ಸಿಇಸಿ ವರದಿಯಲ್ಲಿ ಅಕ್ರಮವಾಗಿ 8.50 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತಾಗಿದೆ ಎಂದು ಆರೋಪಿಸಲಾಗಿತ್ತು.
ದೋಷಮುಕ್ತರಾದ ಬಂದರು ಮತ್ತು ಒಳನಾಡು ಜಲಸಾರಿಗೆ ಅಧಿಕಾರಿಗಳು :
ಕ್ಯಾಪ್ಟನ್ ಆರ್. ಮೋಹನ್
ಕ್ಯಾಪ್ಟನ್ ಸಿ. ಸ್ವಾಮಿ
ಟಿ.ಎಸ್.ರಾಥೋಡ್
ಯಜ್ಞಕುಮಾರ್
ಮಹೇಶ್ ಜೆ. ಬಿಲಿಯೆ
ಟಿ.ಆರ್ ನಾಯಕ್
ಸುರೇಶ್ ಡಿ. ಶೆಟ್ಟಿ
ಯೋಗೇಶ್ ಎ. ಶೆಟ್ಟಿ
ಡಿ.ಡಿ ಪರುಳೇಕರ
ಗೌಸ್ ಅಲಿ
ಸಾಯಿನಾಥ ವಿ. ಥಾಮಸೆ
ರಾಮಚಂದ್ರ ನಾಯಕ
ಎಂ.ಯು ಆಚಾರಿ
ಎನ್.ಎಂ ಗಾಂವ್ಕರ್
ಸಂತೋಷ್ ಡಿ.ಮೆಹತಾ
ಎಂ ಆರ್ ಹರಿಕಂತ್ರ
ಜೆ.ಅವರಸೇಕರ
ರಾಜು ಕೆ. ಕುಂದರ
ಆರ್.ಎಂ ನಾಯಕ್
ಕೆ.ವಿ ನಾಯಕ್
ಪಿ.ಎಸ್ ನಾಯಕ್
ಗಣು ಎನ್.ಅಗೇರ
ಸಾಯಿನಾಥ್ ಕೇರಕರ
ಮಹೇಳ ಎಲ್.ಹರಿಕಂತ್ರ