ಬೆಂಗಳೂರು: ಯಲಹಂಕ ವಲಯದ ಬ್ಯಾಟರಾಯನಪುರ ವಾರ್ಡ್‌ನ ಅಮೃತಹಳ್ಳಿ ಕೆರೆ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದರು.
ಅಮೃತಹಳ್ಳಿ ಕೆರೆಯನ್ನು ಬಿಬಿಎಂಪಿ ಅಭಿವೃದ್ಧಿ ಮಾಡುತ್ತಿದ್ದು, ಒತ್ತುವರಿ ಮಾಡಿಕೊಳ್ಳಲಾಗಿದ್ದ 15 ಕೋಟಿ ರೂ. ಮೌಲ್ಯದ 20 ಗುಂಟೆ ಭೂಮಿಯನ್ನು ತೆರವುಗೊಳಿಸಿ, ವಶಕ್ಕೆ ಪಡೆಯಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಅಮೃತಹಳ್ಳಿ ಕೆರೆಯು 24 ಎಕರೆ 36 ಗುಂಟೆ ವಿಸ್ತೀರ್ಣದಲ್ಲಿದೆ. ಇಲ್ಲಿನ 20 ಗುಂಟೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡವರಿಗೆ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಇದೀಗ ಕಾಂಪೌಂಡ್ ಮತ್ತು ಕೆಲ ಶೌಚಗೃಹಗಳನ್ನು ತೆರವುಗೊಳಿಸಲಾಗಿದೆ ಎಂದು ಕೆರೆಗಳ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ವಿ. ಪ್ರಕಾಶ್ ಮಾಹಿತಿ ನೀಡಿದರು.
ಕಾರ್ಯಾಚರಣೆ ವೇಳೆ ಯಲಹಂಕ ವಲಯ ಜಂಟಿ ಆಯುಕ್ತ ಡಾ. ಅಶೋಕ್, ಯಲಹಂಕ ತಹಶೀಲ್ದಾರ್ ರಘುಮೂರ್ತಿ ಹಾಗು ಪಾಲಿಕೆ ಕೆರೆ ವಿಭಾಗದ ಇಂಜಿನಿಯರ್ ಉಪಸ್ಥಿತರಿದ್ದರು.