ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ಬಳಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರಿಯಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವುದು ಪ್ರಶ್ನಿಸಿ ಸ್ಥಳೀಯ ನಿವಾಸಿ ಜಿಎನ್ ರಾಮಚಂದ್ರರಾವ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ ಶೃಂಗೇರಿ ತಾಲೂಕಿನ ಎರಡಹಳ್ಳಿ ಗ್ರಾಮದ ಸರ್ವೆ ನಂಬರ್ 173 ಮತ್ತು ಸರ್ವೆ ನಂಬರ್ 199ರಲ್ಲಿನ ಜಾಗ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಸಮೀಪದಲ್ಲೇ ನೈಸರ್ಗಿಕವಾದ ಸಿರಿಮನೆ ಜಲಪಾತವಿದೆ. ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರು ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಅಲ್ಲಿಯೇ ಸುರಿದು ಹೋಗುತ್ತಿದ್ದಾರೆ. ಕೆಲ ಒತ್ತುವರಿದಾರರು ಅಭಿವೃದ್ಧಿ ನೆಪದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇವೆಲ್ಲದರಿಂದಾಗಿ ಸಂರಕ್ಷಿತ ಪ್ರದೇಶ ಕಲುಷಿತವಾಗುತ್ತಿದೆ ಜೊತೆಗೆ ಜೀವ ವೈವಿಧ್ಯತೆಗೆ ಧಕ್ಕೆ ಉಂಟಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಜಲಪಾತದ ಬಳಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡದಂತೆ ಹಾಗೂ ಸಂರಕ್ಷಿತ ಪ್ರದೇಶ ಕಲುಷಿತಗೊಳ್ಳದಂತೆ ರಕ್ಷಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತ್ತಲ್ಲದೇ, ತಹಶೀಲ್ದಾರ್ ಹುದ್ದೆಗಿಂತ ಕಡಿಮೆಯಿಲ್ಲದ ಉನ್ನತ ಅಧಿಕಾರಿಯೊಬ್ಬರು ಸ್ಥಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಬೇಕು. ಒಂದು ವೇಳೆ ಅಕ್ರಮ ಅಥವಾ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿದ್ದರೆ ಸ್ಥಳೀಯ ಜಿಲ್ಲಾಡಳಿತ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.