ಬೆಂಗಳೂರು:ನಗರದಲ್ಲಿಅನಧಿಕೃತ ಕ್ಯಾಬ್ಗಳ ಹಾವಳಿಯೂ ಜೋರಾಗಿದ್ದು, ಖಾಸಗಿ ವಾಹನಗಳನ್ನು ಅನಧಿಕೃತ ಟ್ಯಾಕ್ಸಿಗಳಾಗಿ ಪರಿವರ್ತಿಸಿ, ಬಾಡಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ವಂಚಿಸುತ್ತಿವೆ.
ಅದನ್ನು ಹತ್ತಿಕ್ಕಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಮುಂದಾದರೂ ತಂತ್ರಜ್ಞಾನ ಸೇರಿದಂತೆ ಮೂಲಸೌಕರ್ಯ ಕೊರತೆ ಪರಿಣಾಮ ಅನಧಿಕೃತ ಚಾಲಕರಿಗೆ ಅಕ್ರಮ ಹಣ ಸಂಪಾದನೆ ದಾರಿಯಾಗಿದೆ. ಈ ಮೂಲಕ ಹಳದಿ ಬೋರ್ಡ್ ಹೊಂದಿರುವ ಕ್ಯಾಬ್ ಚಾಲಕರ ಹೊಟ್ಟೆಗೆ ಕನ್ನ ಹಾಕುತ್ತಿದ್ದಾರೆ.
ಕ್ಯಾಬ್ ಚಲಾಯಿಸಲು ಸರ್ಕಾರದ ಪರವಾನಗಿ ಪಡೆಯಬೇಕು. ಇದಕ್ಕಾಗಿ ನಿಗದಿತ ಶುಲ್ಕವಿದೆ ಹಾಗೂ ಪರವಾನಗಿ ನವೀಕರಣಕ್ಕೆ ಕೂಡ ಶುಲ್ಕ ಕಟ್ಟಬೇಕು. ಇನ್ನು ಬಿಳಿ ಬೋರ್ಡ್ನ ವಾಹನಗಳನ್ನು ಬಾಡಿಗೆಗೆ ಬಳಸಿಕೊಳ್ಳಬೇಕಾದರೆ, ಅನುಮತಿ ಪಡೆದು ಶುಲ್ಕ ಭರಿಸಿ ಮಾಸಿಕ ತೆರಿಗೆ, ವಿಮೆ, ರಹದಾರಿ ಶುಲ್ಕ ತುಂಬಿ ಹಳದಿ ಬಣ್ಣದ ಬೋರ್ಡ್ ಆಗಿ ಪರಿವರ್ತನೆ ಮಾಡಿಕೊಂಡು ನಂತರ ಬಾಡಿಗೆ ಹೋಗಬಹುದು.