ಬೆಂಗಳೂರು: ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಸಂಬಂಧ ಸಕ್ಷಮ ಪ್ರಾಧಿಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.
2012ರಲ್ಲಿ ನಡೆದಿದ್ದ ಎಪಿಪಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಆರೋಪಿತರ ವಿರುದ್ಧ ಸಂಬಂಧಿಸಿದ ಪ್ರಾಧಿಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ವಕೀಲ ಆತ್ಮ ವಿ. ಹಿರೇಮಠ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಸಲ್ಲಿಸಿದ್ದ ಎರಡು ಪ್ರತ್ಯೇಕ ಪಿಐಎಲ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ವಿಧಿವಶ!
ಈ ವೇಳೆ ಅರ್ಜಿದಾರ ಎಸ್.ಆರ್.ಹಿರೇಮಠ ಅವರ ಪರ ವಾದ ಮಂಡಿಸಿದ ವಕೀಲ ಪ್ರಿನ್ಸ್ ಐಸಾಕ್, 2012ರಲ್ಲಿ ನಡೆದಿದ್ದ ಎಪಿಪಿ ನೇಮಕಾತಿಯಲ್ಲಿ ನ್ಯಾಯಮೂರ್ತಿಗಳ ಸಹಿಯನ್ನೇ ನಕಲು ಮಾಡಿದ ಆರೋಪವಿದೆ. ಇದೊಂದು ನ್ಯಾಯಾಂಗ ವಂಚನೆ ಪ್ರಕರಣವಾಗಿದ್ದರೂ, ಆರೋಪಿತರ ವಿರುದ್ಧ ಕ್ರಮ ಕೈಗೊಂಡಿಲ್ಲ. ಎಪಿಪಿಗಳಾಗಿ ನೇಮಕವಾದ 197 ಮಂದಿಯಲ್ಲಿ 61 ಎಪಿಪಿಗಳ ವಿರುದ್ಧ ಮಾತ್ರವೇ ದೋಷಾರೋಪಣೆ ಸಲ್ಲಿಸಲಾಗಿದೆ. ಉಳಿದಂತೆ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ಆರೋಪಿತರೆಲ್ಲರೂ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ. ಕೆಲವರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಆರೋಪಿತರ ವಿರುದ್ಧ ಶೀಘ್ರವೇ ಕಾನೂನು ರೀತಿ ಕ್ರಮ ಜರುಗಿಸಲು ನಿರ್ದೇಶನ ನೀಡಬೇಕು ಎಂದು ಕೋರಿದರು.
ಸರ್ಕಾರದ ಪರ ವಕೀಲರು ವಾದಿಸಿ, ಪ್ರಕರಣವನ್ನು ಈಗಾಗಲೇ ತನಿಖೆ ನಡೆಸಲಾಗಿದೆ. ದೋಷಾರೋಪಣೆ ಪಟ್ಟಿಯಲ್ಲಿರುವ ಎಪಿಪಿಗಳನ್ನು ಅಮಾನತು ಮಾಡಲಾಗಿತ್ತು. ಆದರೆ, ಕೆಎಟಿ ಇದಕ್ಕೆ ತಡೆ ನೀಡಿರುವುದರಿಂದ ಅವರು ಸೇವೆ ಮುಂದುವರೆಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಜೂನ್ 12ರಂದು ಸಂಬಂಧಪಟ್ಟ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹಾಗೆಯೇ, 2018ರ ಮಾರ್ಚ್ 15ರಂದು ಹೆಚ್ಚುವರಿ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಸಂಬಂಧಪಟ್ಟ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ ಎಂದರು.
ಸರ್ಕಾರಿ ವಕೀಲರ ಹೇಳಿಕೆ ಪರಿಗಣಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಗಳನ್ನು ಇತ್ಯರ್ಥಪಡಿಸಿತು. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಕರಣದ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಯನ್ನು ತ್ವರಿತವಾಗಿ ನಡೆಸಿ ಇತ್ಯರ್ಥಪಡಿಸಬೇಕು ಎಂದು ನಿರ್ದೇಶಿಸಿತು.