ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಮತ್ತು ರೋಬೋಟಿಕ್‌ಸ್ ಟೆಕ್ನಾಲಜಿ ಪಾರ್ಕ್, ನಗರದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಂದ ರೋಗ ಮತ್ತು ರೋಗಿಯ ನಿಖರ ದತ್ತಾಂಶ ಸಂಗ್ರಹಿಸಲು ಪಾಲಿಕೆಗೆ ಸಹಾಯವಾಗುವ ಅಪ್ಲಿಕೇಷನ್ ಅಭಿವೃದ್ಧಿ ಪಡಿಸುತ್ತಿದೆ.
ಈ ಕುರಿತು ಪಾಲಿಕೆಯ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕಚಂದ್ರ ಮಾತನಾಡಿ, ''ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,000 ಖಾಸಗಿ ಆಸ್ಪತ್ರೆಗಳಿವೆ. ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿಯಡಿ ಸುಮಾರು 400 ಆಸ್ಪತ್ರೆಗಳು ಮಾತ್ರ ರೋಗದ ದತ್ತಾಂಶ ನಮೂದಿಸುತ್ತಿವೆ. ಆ್ಯಪ್ ಅಭಿವೃದ್ಧಿ ಆರಂಭಿಕ ಹಂತದಲ್ಲಿದೆ. ಮೊದಲ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಗಮನ ಹರಿಸಲಾಗುತ್ತದೆ. ಎರಡನೇ ಹಂತದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಮೊದಲ ಹಂತದಲ್ಲಿ ಆ್ಯಪ್‌ನಲ್ಲಿ ಸಮುದಾಯದಿಂದ ರೋಗ ಮತ್ತು ರೋಗಿಗಳ ದತ್ತಾಂಶ ಸಂಗ್ರಹಿಸಲು ಆಶಾ ಕಾರ್ಯಕರ್ತರು ಮತ್ತು ನರ್ಸ್‌ಗಳು ಸಹಕಾರಿಯಾಗಲಿದ್ದಾರೆ'' ಎಂದು ತಿಳಿಸಿದರು.
"ಇದೀಗ ಆರಂಭಿಕ ಹಂತದಲ್ಲಿ ಸುಮಾರು 15 ಆಶಾ ಕಾರ್ಯಕರ್ತರು ಅಪ್ಲಿಕೇಶನ್‌ನಲ್ಲಿ ಡೆಂಗ್ಯೂ ದತ್ತಾಂಶ ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿ ಹಂತ ಮುಗಿದ ನಂತರ ಅಪ್ಲಿಕೇಶನ್ ಪರಿಶೀಲನೆ ಮಾಡಲಾಗುತ್ತದೆ. ಇದರಲ್ಲಿ ವೈದ್ಯಕೀಯ ಅಧಿಕಾರಿಗಳು ಡೆಂಗ್ಯೂ ಪ್ರಕರಣಗಳು ಅಥವಾ ಸಂತಾನೋತ್ಪತ್ತಿಗಳ ಸ್ಥಳದ ಬಗ್ಗೆ ಪರಿಶೀಲಿಸುತ್ತಾರೆ. ಮೂರನೇ ಹಂತದಲ್ಲಿ ಔಷಧಿ ಸಿಂಪಡಣೆ ಕುರಿತು ಮತ್ತು ತಂಡವು ರೋಗದ ಸಂತಾನೋತ್ಪತ್ತಿ ಸ್ಥಳಗಳಲ್ಲಿನ ಚಟುವಟಿಕೆಗಳನ್ನು ವರದಿ ಮಾಡುತ್ತವೆ. ಈ ಎಲ್ಲಾ ಮಾಹಿತಿ ಆ್ಯಪ್‌ನಲ್ಲಿ ಇರಲಿದೆ" ಎಂದು ಹೇಳಿದರು.