ಆನೇಕಲ್; ತಿಂಗಳಿನಲ್ಲಿ ಬರೋಬ್ಬರಿ 23ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ 60 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನ, ಕಾರು, ಬೈಕ್, ನಗದು ಮತ್ತು ಮೊಬೈಲ್ಗಳನ್ನು ಆನೇಕಲ್ ಪೊಲೀಸರು ವಶಪಡಿಸಿಕೊಂಡಿದ್ದು, ಅವರ ಕಾರ್ಯಕ್ಕೆ ಐಜಿಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿ ಲಾಕ್ ಡೌನ್ ಸಮಯದಲ್ಲಿ ಇಸ್ಪೀಟ್ ಆಡಲು ಬೈಕ್ ಕಳ್ಳತನ ಮಾಡುತ್ತಿದ್ದ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹನ್ನೋಂದು ಲಕ್ಷ ಬೆಲೆ ಬಾಳುವ ಒಟ್ಟು ಹನ್ನೊಂದು ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ದರೋಡೆ ಮಾಡುತ್ತಿದ್ದ ಸಂತೋಷ್, ರಾಜೇಶ್, ಪವನ್, ಶ್ರೀಧರ್ ಎಂಬಾ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಹಣ ಮತ್ತು ಮೂರ್ನಾಲ್ಕು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ರಂಜಿತ್ ಎಂಬ ಮೊಬೈಲ್ ಕಳ್ಳನನ್ನು ಬಂಧಿಸಿರುವ ಪೊಲೀಸರು ವಿವಿಧ ಕಂಪನಿಗೆ ಸೇರಿದ 23ಕ್ಕು ಹೆಚ್ಚು ಮೊಬೈಲ್ ಫೋನ್ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಲೇಔಟ್ನಲ್ಲಿ ಇರಿಸಲಾಗುತ್ತಿದ್ದ ಕಾಪರ್ ವೈರ್ಗಳನ್ನು ಕಳ್ಳತನ ಮಾಡುತ್ತಿದ್ದ ಉಮಾಶಂಕರ್ ಮತ್ತು ಜಗದೀಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 1 ಲಕ್ಷ ಬೆಲೆ ಬಾಳುವ ವೈರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದೇ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಾರ್ , ಯೋಗಿಶ್, ರಕ್ಷಿತ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ರಾತ್ರಿ ವೇಳೆ ಕಳ್ಳತನ ಮಾಡಿದ್ದ ಐದು ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬರು ಬಾಲಕರನ್ನು ಬಂಧಿಸಿದ್ದು, ಬಂಧಿತರಿಂದ ಒಂಬತ್ತು ಲಕ್ಷ ಬೆಲೆ ಬಾಳುವ ಐದು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.