ಬೆಂಗಳೂರು:ಲಾಕ್ಡೌನ್ ನಡುವೆಯೂ ಅಗತ್ಯ ವಸ್ತುಗಳಿಗಾಗಿ ಸಾರ್ವಜನಿಕರು ದಿನಸಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಸೂಪರ್ ಮಾರ್ಕೆಟ್ಗಳ ಮುಂದೆ ಜನಸಂದಣಿ ಕಂಡು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ದಿನದ 24 ಗಂಟೆ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದಾರೆ.
ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ಗಳು ಇಡೀ ದಿನ ತೆರೆದಿರಲಿವೆ - ಐಜಿಪಿ ಪ್ರವೀಣ್ ಸೂದ್ ಟ್ವೀಟ್
ಅಗತ್ಯ ವಸ್ತುಗಳನ್ನು ಕೊಳ್ಳಲು ದಿನಸಿ ಅಂಗಡಿಗಳಿಗೆ ಅಪಾರ ಸಂಖ್ಯೆಯಲ್ಲಿ ಜನರು ಮುಗಿಬೀಳುತ್ತಿರುವ ಹಿನ್ನೆಲೆ ಇಡೀ ದಿನ ದಿನಸಿ ಅಂಗಡಿ ತೆರೆಯಲು ಐಜಿಪಿ ಪ್ರವೀಣ್ ಸೂದ್ ಅನುಮತಿ ನೀಡಿದ್ದಾರೆ.
ಅಗತ್ಯ ವಸ್ತುಗಳಿಗಾಗಿ ಜನರು ಅಂಗಡಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ತಗುಲುವ ಆತಂಕವಿದೆ. ಅಗತ್ಯ ವಸ್ತುಗಳ ಲಭ್ಯತೆ ಇರಲ್ಲ ಎಂಬ ಭೀತಿಯಿಂದ ದಿನಸಿ ವಸ್ತುಗಳ ಖರೀದಿಗೆ ಏಕಾಏಕಿ ಜನರು ಸೇರುತ್ತಿದ್ದಾರೆ. ಇದನ್ನು ತಪ್ಪಿಸಲು 24 ಗಂಟೆಗಳ ಕಾಲ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಐಜಿಪಿ ಪ್ರವೀಣ್ ಸೂದ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಕಡೆ ದಿನಸಿ, ಕಿರಾಣಿ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‌ಗಳಿಗೆ ಅನುಮತಿ ಇರಲಿದೆ. ಗ್ರಾಹಕರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರ ಜೊತೆ ಸಹಕರಿಸಲು ಮನವಿ ಮಾಡಿರುವ ಅವರು, ವೈದ್ಯಕೀಯ ಚಿಕಿತ್ಸೆ, ನೆರವು ಬೇಕಾದವರಿಗೆ ಕರ್ಫ್ಯೂ ಪಾಸ್ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.