ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತು ಬೆಂಗಳೂರು: "ನಿಮಗೆ ದಮ್ಮು, ತಾಕತ್ತು ಇದ್ದರೆ ನನ್ನನ್ನು ಹೊಡೆದು ಹಾಕಿ. ನಿಮ್ಮ ಬೆದರಿಕೆಗಳಿಗೆ ನಾನು ಹೆದರುವುದೂ ಇಲ್ಲ, ಕುಗ್ಗುವುದೂ ಇಲ್ಲ" ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲೆಸೆದರು. 2023-24ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಸಂಪುಟದ ಸಚಿವರೊಬ್ಬರು ನನ್ನನ್ನು ಟಿಪ್ಪು ಸುಲ್ತಾನ್ ರೀತಿ ಹೊಡೆದು ಹಾಕಿ ಎಂದು ಕರೆ ಕೊಟ್ಟಿದ್ದಾರೆ. ನನ್ನನ್ನು ಹೆದರಿಸಬಹುದು ಎಂದು ಭಾವಿಸಿದ್ದರೆ, ಅದು ನಿಮ್ಮ ಭ್ರಮೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ ಎಂದು ಹೇಳಿದರು. ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಸೇರಿದಂತೆ ಪ್ರತಿಯೊಬ್ಬರ ಪರವಾದ ನನ್ನ ಹೋರಾಟ ನಿಲ್ಲುವುದಿಲ್ಲ. ಯಾವುದೇ ಕಾರಣಕ್ಕೂ ನನ್ನನ್ನು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ" ಎಂದರು.
"ಸಚಿವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು. ಅವರು ಜವಾಬ್ದಾರಿ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡಿರುವುದು ಭೂಗತ ರೌಡಿಗಳು ಬಳಸುವ ಭಾಷೆಯಂತಿದೆ. ಸರ್ಕಾರ ಹಾಗೂ ಗೃಹ ಇಲಾಖೆ ಜೀವಂತವಾಗಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ನೀವು ಒಳ್ಳೆಯವರು, ಆದರೆ, ಅಸಮರ್ಥ ಗೃಹ ಮಂತ್ರಿ" ಎಂದು ಆರಗ ಜ್ಞಾನೇಂದ್ರರನ್ನು ಕೆಣಕಿದರು.
"ರಾಣಿ ಅಬ್ಬಕ್ಕ ಮತ್ತು ಟಿಪ್ಪು ಸುಲ್ತಾನ್, ಮಹಾತ್ಮ ಗಾಂಧಿ ಮತ್ತು ಗೋಡ್ಸೆ, ಗಾಂಧಿ ಮತ್ತು ಸಾವರ್ಕರ್ ಇದೆಲ್ಲ ಬಿಟ್ಟುಬಿಡಿ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ ಬನ್ನಿ. ನಾನು ಸಿದ್ಧ, ನೀವೂ ಬನ್ನಿ. ಇಲ್ಲಿ ದಮ್ಮು ತಾಕತ್ತು ತೋರಿಸಿ ಜನರನ್ನು ಭಾವನಾತ್ಮಕವಾಗಿ ಸೆಳೆದು ಮತ ಧ್ರುವೀಕರಣ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದರೆ, ಜನತೆ ಒಪ್ಪುವುದಿಲ್ಲ."
"ನಿಮ್ಮದು ಗೋಡ್ಸೆ ಸಂಸ್ಕೃತಿ. ನಮ್ಮದು ಮಹಾತ್ಮ ಗಾಂಧಿ ಸಂಸ್ಕೃತಿ. ನಿಮ್ಮನ್ನು ಕರ್ನಾಟಕದ ಜನತೆ ಒಪ್ಪುವುದಿಲ್ಲ. ನೀವು ಅಭಿವೃದ್ಧಿ ಬಗ್ಗೆ ಮಾತನಾಡಿ ಚುನಾವಣೆಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮುಗಿಸಿಬಿಡಿ ಅಂತ ಹೇಳಿದ್ದಾರೆಂದು ವಾಗ್ದಾಳಿ ನಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನೀವು ಈಗಾಗಲೇ ಹೇಳಿದ್ದೀರಿ, ಅದಕ್ಕೆ ಅವರೂ ಹೇಳಿದ್ದಾರೆ. ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ. ಅದು ರಾಜಕೀಯ ಪರಿಭಾಷೆಯಲ್ಲಿ ಹೇಳಿದ್ದಾರೆ" ಎಂದು ಸಮರ್ಥಿಸಿಕೊಂಡರು.
ಆಗ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, "ನಿಮ್ಮಇಲಾಖೆ ಸತ್ತು ಹೋಗಿದೆ ಎಂದರು. ಇದಕ್ಕೆ ಜ್ಞಾನೇಂದ್ರ ಅವರು, ಹೀಗೆ ಆರೋಪ ಮಾಡಬೇಡಿ, ನಮ್ಮ ಇಲಾಖೆ ಉತ್ತಮ ಕೆಲಸ ಮಾಡಿದೆ. ನಿಮ್ಮ ಅವಧಿಗಿಂತಲೂ ಹತ್ತು ಪಟ್ಟು ಉತ್ತಮ ಕೆಲಸ ಮಾಡಿದೆ ಎಂದು ತಿರುಗೇಟು ನೀಡಿದರು. ಮಾತು ಮುಂದುವರೆಸಿದ ಸಿದ್ದರಾಮಯ್ಯ, ಹೌದು ನೀವು ಒಳ್ಳೆಯವರು, ಆದರೆ, ಅಶ್ವತ್ಥನಾರಾಯಣ ನೀಡಿದ ಹೇಳಿಕೆಗೆ ಕ್ರಮವಾಯಿತೇ" ಎಂದು ಪ್ರಶ್ನಿಸಿದರು.
ಇದನ್ನೂಓದಿ:ಕರ್ನಾಟಕ ವಿಧಾನಸಭಾ ಚುನಾವಣೆ 2023: '5ಬಿ' ಕಾರ್ಯತಂತ್ರ ರೂಪಿಸಿದ ಬಿಜೆಪಿ