ಬೆಂಗಳೂರು: ಹಬ್ಬದ ದಿನ ಅಡುಗೆ ಮಾಡಿಲ್ಲ ಎಂದು ಕೋಪಗೊಂಡು ಕುಡುಕ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ವಿಚಾರಣಾ ನ್ಯಾಯಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಮಾರ್ಪಡಿಸಿ ಜೈಲಿನಿಂದ ಬಿಡುಗಡೆಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ.
ತನ್ನ ಪತ್ನಿ ರಾಧಾ ಎಂಬುವರನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸುರೇಶ ಎಂಬುವರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾ. ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಹಬ್ಬದ ದಿನ ಅಡುಗೆ ಮಾಡಿಲ್ಲ, ಮಕ್ಕಳಿಗೆ ಊಟ ಕೊಟ್ಟಿಲ್ಲ. ಪಾನಮತ್ತಳಾಗಿ ಹೆಂಡತಿ ಮಲಗಿರುವುದಕ್ಕೆ ಕೋಪಗೊಂಡ ಪತಿ ದಿಢೀರ್ ಆವೇಷಕ್ಕೊಳಗಾಗಿ ದೊಣ್ಣೆಯಿಂದ ಹೊಡೆದಿದ್ದನು. ಪರಿಣಾಮ ಪತ್ನಿ ಮೃತಪಟ್ಟಿದ್ದಾರೆ. ಆದರೆ, ಆರೋಪಿಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. ಹಾಗಾಗಿ, ಆತನು ಮಾಡಿದ್ದು, ಕೊಲೆಯೆಂದು ಪರಿಗಣಿಸಲಾಗುವುದಿಲ್ಲ. ಬದಲಿಗೆ ‘ಉದ್ದೇಶಪೂರ್ವಕವಲ್ಲದ ನರಹತ್ಯೆ’ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಆದ್ದರಿಂದ ಅಪರಾಧಿಗೆ ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 302 (ಕೊಲೆ) ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ಆದೇಶವನ್ನು ಮಾರ್ಪಾಡಿಸಿ ಅದನ್ನು ‘ಉದ್ದೇಶಪೂರ್ವಕವಲ್ಲದ ನರಹತ್ಯೆ ಎಂಬ ಆರೋಪ ಎಂದು ಪರಿಗಣಿಸಿದೆ. ಈಗಾಗಲೇ ಆರೋಪಿ 6 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಆನುಭವಿಸಿರುವ ಕಾರಣ, ಆತನ ಮೇಲೆ ಬೇರೆ ಯಾವುದೇ ಪ್ರಕರಣ ಇಲ್ಲದಿದ್ದರೆ ಆತನನ್ನು ತಕ್ಷಣ ಜೈಲಿನಿಂದ ಬಿಡುಗಡೆಗೊಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಮೃತ ಮಹಿಳೆ ಮದ್ಯ ವ್ಯಸನಿಯಾಗಿದ್ದಳು ಎಂಬುದನ್ನೂ ಸಾಕ್ಷಿಗಳು ದೃಢಪಡಿಸುತ್ತಿವೆ. ಇಬ್ಬರು ಮಕ್ಕಳನ್ನು ಹೊಂದಿದ್ದ ಆಕೆ ಯಾವುದೇ ಮನೆ ಕೆಲಸ ಮಾಡುತ್ತಿರಲಿಲ್ಲ. ಗೌರಿ ಹಬ್ಬದ ದಿನ ಸಹ ಆಕೆ ಅಡುಗೆ ಮಾಡದೆ ಹಬ್ಬವನ್ನು ಆಚರಿಸದೆ ಕುಡಿದು ಮನೆಯಲ್ಲಿ ಮಲಗಿದ್ದಳು ಎಂಬುದನ್ನು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಸುರೇಶ ತನ್ನ ಮೊದಲ ಪತ್ನಿ ಮೀನಾಕ್ಷಿಯಿಂದ ಪ್ರತ್ಯೇಕವಾಗಿ ವಾಸುತ್ತಿದ್ದನು. ಇದೇ ವೇಳೆ ರಾಧ ಅವರ ಪತಿ ಅಗಲಿದ್ದರು. ಹೀಗಾಗಿ ಸುರೇಶ ಮತ್ತು ರಾಧಾ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. 2016ರಲ್ಲಿ ಗಣೇಶ ಹಬ್ಬದ ದಿನ ಸುರೇಶ ಮನೆಗೆ ಬಂದಾಗ ಹಬ್ಬವನ್ನೂ ಆಚರಿಸದೆ, ಅಡುಗೆ ಮಾಡದೆ, ಮಕ್ಕಳಿಗೂ ಊಟ ಕೊಡದೆ ರಾಧಾ ಕುಡಿದು ಮಲಗಿದ್ದಳು. ಕೋಪಗೊಂಡ ಸುರೇಶ ದೊಣ್ಣೆಯಿಂದ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿದ್ದಳು. 2017ರಲ್ಲಿ ವಿಚಾರಣಾ ನ್ಯಾಾಯಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸುರೇಶ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ:ಗರ್ಭ ಧರಿಸಲು ಇಚ್ಛಿಸಿದ ಪತ್ನಿ: ಅಪರಾಧಿ ಪತಿಗೆ ತುರ್ತು ಪೆರೋಲ್ ನೀಡಿದ ಹೈಕೋರ್ಟ್