ಬೆಂಗಳೂರು: ಕೊರೊನಾ ಸಮಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಿದ್ದರೆ, 50 ಸಾವಿರ ಜನ ಸಾಯ್ತಿದ್ರು ಎಂದು ಮಾಜಿ ಶಾಸಕ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಅವರು, ಇದೇ ಸಂದರ್ಭ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಿದ್ದರೆ, ಅವರು ಪರಿಸ್ಥಿತಿಯನ್ನು ಇಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ದೈವ ಭಕ್ತರಾಗಿರುವ ಬಿ.ಎಸ್. ಯಡಿಯೂರಪ್ಪ ರಾಜ್ಯದ ಸಿಎಂ ಆಗಿರುವುದರಿಂದ ಇಂದು ಕೊರೊನಾ ನಿಯಂತ್ರಣದಲ್ಲಿದೆ. ಅವರಾಗಿದ್ದರೆ ಕೊರೊನಾ ಅದೇನ್ ಬಿಡು, ಏನಾಗಲ್ಲ ಎಂದು ಸಿದ್ದರಾಮಯ್ಯ ಹೇಳ್ತಿದ್ರು. ಕೊರೊನಾ ನಾ ನೋಡಿದ್ದೀನಿ ಬಿಡು ಬ್ರದರ್, ಮೊನ್ನೆ ಕೊರೊನಾ ಸಿಕ್ಕಿದ್ರು ಎಂದು ಕುಮಾರಸ್ವಾಮಿ ಹೇಳ್ತಿದ್ರು. ಹೀಗೆ ಹೇಳುವ ಮೂಲಕ ಮೈತ್ರಿ ಸರ್ಕಾರ ಮಹಾಮಾರಿಯನ್ನ ಯಾವ ಮಟ್ಟಕ್ಕೆ ನಿರ್ಲಕ್ಷಿಸುತ್ತಿತ್ತು ಎಂಬುದನ್ನು ವಿವರಿಸಿದರು.
ನಾವು ತ್ಯಾಗ ಮಾಡಿ ಮೈತ್ರಿ ಸರ್ಕಾರ ಪತನ ಮಾಡಿದ್ದಕ್ಕೆ ನಮ್ಮನ್ನ ರಾಜ್ಯದ ಜನ ಅಭಿನಂದಿಸಬೇಕು. ನಾವು ಕೂಡ ಶೇ.100 ರಷ್ಟು ಕೊರೊನಾ ವಾರಿಯರ್ಸ್. ದೀಪ ಹಚ್ಚುತ್ತಾರೆ, ಚಪ್ಪಾಳೆ ಹೊಡಿತಾರೆ ಅಂತಾ ಉಡಾಫೆ ಮಾಡ್ತಿದ್ರು. ಆದರೆ, ಇದಕ್ಕೆ ನಿಯಂತ್ರಣ ಉತ್ತರವಾಗಿದೆ ಎಂದರು.
ಅಧಿಸೂಚನೆ ಆಗಿಲ್ಲ:
ವಿಧಾನಪರಿಷತ್ ಸ್ಥಾನ ವಿಚಾರ, ನಾವು ಅಧಿಕಾರಕ್ಕಾಗಿ ಬಂದಿಲ್ಲ. ಅಷ್ಟಕ್ಕೂ ಪರಿಷತ್ ಚುನಾವಣೆ ಇನ್ನೂ ಅಧಿಸೂಚನೆ ಆಗಿಲ್ಲ. ನಮಗೆ ಕೊಟ್ಟ ಮಾತಿನಂತೆ ನಡೆಯೋ ಯಡಿಯೂರಪ್ಪ ಮೇಲೆ ಪೂರ್ಣ ವಿಶ್ವಾಸವಿದೆ. ಇಡೀ ಪ್ರಪಂಚದಲ್ಲಿ ನಾಲಿಗೆ ಮಾತಿನ ಮೇಲೆ ನಿಲ್ಲುವ ಏಕೈಕ ನಾಯಕ ಯಡಿಯೂರಪ್ಪ. ಕೊಟ್ಟ ಮಾತು ನೆರವೇರಿಸುವ ಏಕೈಕ ನಾಯಕ. ನಮಗೆ ಏನು ಹೇಳಿದ್ರು ಅದನ್ನ ಮಾಡ್ತಾರೆ. ಅದರಲ್ಲಿ ಸಂಶಯವೇ ಬೇಡ ಎಂದರು.
ಖಾಸಗಿ ಶಾಲೆ ಉದ್ಧಟತನ:
ಖಾಸಗಿ ಶಾಲೆಗಳ ಉದ್ದಟತನವನ್ನ ಸಹಿಸೋಕ್ಕಾಗಲ್ಲ. ಇಷ್ಟು ದಿನ ಖಾಸಗಿ ಶಾಲೆಗಳು ತಿಂದುತೇಗಿದ್ದು ಸಾಕು. ಅವರು ಇಷ್ಟು ಮಾಡಿದ್ದು ಸಾಕು. ಕೊರೊನಾ ಸಮಯದಲ್ಲಿ ಯಾರೆಲ್ಲಾ ಏನೇನೋ ತ್ಯಾಗ ಮಾಡಿದ್ದಾರೆ. ಇವರು ಒಂದು ವರ್ಷ ಫೀಸ್ ತಗೊಳ್ಳೋದು ಬೇಡಾ ಬಿಡಿ. ಜೊತೆಗೆ ಸದ್ಯ ಶಾಲೆಗಳನ್ನ ಆರಂಭಿಸೋ ಅವಸರ ಬೇಡ. 37 ಜಯಂತಿಗಳಿಗೆ ರಜಾ ಇದೆ. ಆ ರಜಾಗಳನ್ನ ಕ್ಯಾನ್ಸಲ್ ಮಾಡಿ. ಅಷ್ಟಕ್ಕೂ ಖಾಸಗಿ ಶಾಲೆಗಳು ಶೇ.50 ರಷ್ಟು ಫೀ ಕಡಿಮೆ ಮಾಡಲಿ ಅಥವಾ ಶೇ.30 ರಷ್ಟಾದರೂ ಫೀ ಕಡಿಮೆ ಮಾಡಲಿ ಎಂದರು.
ಖಾಸಗಿ ಶಾಲೆಗಳು ಸರ್ಕಾರ ಕೊಟ್ಟ ಅನುಮತಿ ಮೇಲೆ ತಾನೇ ನಡೆಯೋದು. ದೈವ ಭಕ್ತಿ ಇರೋ ಸಿಎಂ ಇರೋ ಕಾರಣ ಕೊರೊನಾ ನಿಯಂತ್ರಣದಲ್ಲಿದೆ. ಸಮ್ಮಿಶ್ರ ಸರ್ಕಾರ ಇದ್ದಿದ್ರೆ ಲಾಕ್ಡೌನ್ ಆಗ್ತಾನೇ ಇರಲಿಲ್ಲ ಎಂದರು.