ಬೆಂಗಳೂರು :ಸುಧಾರಣೆ ಆಗಬೇಕು ಅಂದರೆ ಪತ್ರಗಳನ್ನ ಬರೆಯುತ್ತೇನೆ. ಇನ್ನು ಮುಂದೆಯೂ ಪತ್ರಗಳನ್ನು ಬರೆಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಕಲಬುರಗಿ ವಿಭಾಗದಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ರೈತರು ಆತಂಕದಲ್ಲಿ ಇದ್ದಾರೆ. ಇದರಿಂದ ಬೇರೆ ಬೇರೆ ಸಮಸ್ಯೆಗಳಾಗುತ್ತಿದೆ. ಕೊಪ್ಪಳ ಜಿಲ್ಲಾ ಅಧಿಕಾರಿಗಳನ್ನು ಕರೆದರೂ ಅವರೂ ಬಂದಿಲ್ಲ. ಹೀಗಾಗಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದೆ. ಕೂಡಲೇ ಜಾರ್ಜ್ ಕರೆ ಮಾಡಿ ಸಭೆ ಕರೆದಿದ್ದೇನೆ ಅಂದಿದ್ದಾರೆ. ಯಾವ ಅಧಿಕಾರಿ ಕೂಡ ಸ್ಪಂದಿಸಲಿಲ್ಲ. ಹಾಗಾಗಿಯೇ ಸಿಎಂಗೆ ಪತ್ರ ಬರೆದಿದ್ದು, ಆಡಳಿತದಲ್ಲಿ ಸುಧಾರಣೆಯಾಗಬೇಕು ಅಂದರೆ ಪತ್ರ ಬರೆಯಲೇಬೇಕು ಎಂದು ತಿಳಿಸಿದರು.
ಈ ರಾಜ್ಯಕ್ಕೆ ಈ ಭಾಗದ ಜನರಿಗೆ ಒಳ್ಳೆಯದಾಗಲಿ ಅನ್ನೋದು ನನ್ನ ಉದ್ದೇಶ. ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲವೇ ಸಿದ್ದರಾಮಯ್ಯ ಮೇಲಾಗಲಿ ಯಾವುದೇ ಸಿಟ್ಟು ಇಲ್ಲ. ಮನುಷ್ಯ ಅಂದಮೇಲೆ ಮಂತ್ರಿ ಆಗಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಆದರೆ, ಕೊಟ್ಟಿಲ್ಲ ಅಂತ ಯಾರ ಮೇಲೂ ಸಿಟ್ಟು ಇಲ್ಲ. ನನ್ನನ್ನು ಸಚಿವರನ್ನಾಗಿ ಮಾಡಬೇಕಿತ್ತು. ಆದರೆ ಮಾಡಿಲ್ಲ. ಅದು ಅವರ ನಿರ್ಧಾರ ಅಷ್ಟೆ ಎಂದರು.
ನಾನು ಸ್ವಾಭಿಮಾನದಿಂದ ಬದುಕುವವನು : ನಾನು ಸ್ವಾಭಿಮಾನದಿಂದ ಬದುಕುವವನು. ಅಲ್ಲೊಂದು ಇಲ್ಲೊಂದು ನಾನು ಮಾತಾನ್ನಾಡೋದಿಲ್ಲ. ಆಡಳಿತ ಸುಧಾರಣೆಯಾಗಬೇಕು ಅನ್ನೋದಷ್ಟೆ ನನ್ನ ಉದ್ದೇಶ. ನಾನು ಬೇರೆ ಯಾವ ಪಕ್ಷಕ್ಕೂ ಹೋಗಬೇಕು ಅಂತಿಲ್ಲ. ನಾನು ಇಲ್ಲೇ ಖುಷಿಯಾಗಿದ್ದೇನೆ ಎಂದರು. ಸಮಸ್ಯೆಗಳನ್ನ ಬಗೆಹರಿಸಲು ಪತ್ರಗಳನ್ನ ಬರೆಯುತ್ತೇನೆ. ಇದರಲ್ಲಿ ತಪ್ಪು ಏನಿದೆ?. ನಾನು ಯಾವ ಅಸಮಾಧಾನಿತ ಶಾಸಕರಿಗೂ ನಾಯಕತ್ವ ವಹಿಸೋದಿಲ್ಲ. ಪಕ್ಷವನ್ನೂ ತೊರೆಯೋದಿಲ್ಲ. ನಾನು ಇಲ್ಲಿ ತುಂಬಾ ಸಂತೋಷವಾಗಿದ್ದೇನೆ ಎಂದು ತಿಳಿಸಿದರು.