ಬೆಂಗಳೂರು : ಎಲ್ಲರಿಗೂ ಮಕ್ಕಳು ಎಂದರೆ ಪ್ರೀತಿ ಇದ್ದೇ ಇರುತ್ತೆ. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನಮಗೂ ಬೇಡ ಎಂದು ಸಚಿವ ವಿ. ಸೋಮಣ್ಣ ಸೂಚ್ಯವಾಗಿ ತಿಳಿಸಿದ್ದಾರೆ. ಬಿಜೆಪಿಯಿಂದ ಮುನಿಸಿಕೊಂಡಿರುವ ಸಚಿವ ವಿ ಸೋಮಣ್ಣ, ಕಾಂಗ್ರೆಸ್ಗೆ ಹೋಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕಲ್ವಾ?. ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದರೆ ನಮಗೂ ಬೇಡ. ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ. ನನಗೆ ಅಸಮಾಧಾನ ಇದೆ ಅಂತ ಎಲ್ಲಾದ್ರೂ ಹೇಳಿದ್ದೀನಾ? ಎಂದು ಪರೋಕ್ಷವಾಗಿ ಪಕ್ಷಕ್ಕೆ ಒಂದು ಸಂದೇಶ ನೀಡಿದರು.
ಅಸಮಾಧಾನ ವ್ಯಕ್ತಪಡಿಸದ ಸೋಮಣ್ಣ: ವಿ. ಸೋಮಣ್ಣ ತಮ್ಮ ಮಗನಿಗೂ ಬಿಜೆಪಿಯಿಂದ ಈ ಬಾರಿ ಟಿಕೆಟ್ ಕೇಳುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಅನುಮಾನವಾಗಿರುವುದರಿಂದ ಮುನಿಸಿಕೊಂಡಿರುವ ವಿ. ಸೋಮಣ್ಣ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ವಿ. ಸೋಮಣ್ಣ ಬಿಜೆಪಿಯ ವಿಜಯ ಸಂಕಲ್ಪಯಾತ್ರೆಗೂ ಗೈರಾಗುತ್ತಿದ್ದಾರೆ. ತಮ್ಮ ಅಸಮಾಧಾನದ ಬಗ್ಗೆ ಬಹಿರಂಗವಾಗಿ ಎಲ್ಲೂ ವಿ. ಸೋಮಣ್ಣ ತಿಳಿಸಿಲ್ಲ. ಇದೀಗ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನನಗೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ : ರಾಜಕಾರಣದಲ್ಲಿ ಇವೆಲ್ಲ ಇರುತ್ತವೆ. ಏನು ಹೇಳಬೇಕು. ಎಲ್ಲಿ ಹೇಳಬೇಕು ಹೇಳಿದ್ದೀನಿ. ಕವಲುದಾರಿಗಳು ಇರುತ್ತವೆ. ನಾನೇನೂ ಸನ್ಯಾಸಿ ಅಲ್ಲ. ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತುಕೊಳ್ಳುತ್ತೇನೆ, ಇಲ್ಲ ಎಂದರೆ ಇಲ್ಲ ಅಷ್ಟೇ. ನಾನು ಯಾವತ್ತಾದ್ರೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ?. ಡಿಕೆಶಿ, ಸಿದ್ದರಾಮಯ್ಯ ನಾವೆಲ್ಲ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಕೆಲಸ ಅವರು ಮಾಡ್ತಾರೆ, ನನ್ನ ಕೆಲಸ ನಾನು ಮಾಡ್ತೇನೆ. ನನಗೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ ಎಂದು ಇದೇ ವೇಳೆ ತಿಳಿಸಿದರು.